ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜಕೀಯ ನಾಯಕರ ಪರಸ್ಪರ ವಾಕ್ಸಮರ ತಾರಕಕ್ಕೆ ಏರಿದ್ದು, ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ನನ್ನ ಬಳಿ ಇರುವ ದಾಖಲೆಗಳನ್ನು ಏನಾದರೂ ಬಿಡುಗಡೆ ಮಾಡಿದರೆ ಐದರಿಂದ ಆರು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಬೆಳಗ್ಗೆ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ,ನನ್ನನ್ನು ಜೈಲಿಗೆ ಕಳುಹಿಸಲು ಸರ್ಕಾರ ಹುನ್ನಾರ ನಡೆಸಿದೆ. 12 ವರ್ಷದ ಹಳೆಯ ಕೇಸಲ್ಲಿ ಜೈಲಲ್ಲಿ ಕಳುಹಿಸೋಕೆ ಸಾಧ್ಯವಿಲ್ಲ. ರಾಜೀನಾಮೆ ನೀಡುವ ಸ್ಥಿತಿ ಬಂದರೆ ನಾನೇ ಕೊಡುತ್ತೇನೆ.ಕಣ್ಣಲ್ಲಿ ನೀರು ಹಾಕಿಸಿದವರು ನಾಶ ಆಗ್ತಾರೆ. ಎಲ್ಲರೂ ನಾಶ ಆಗುತ್ತಾರೆ. ಈಗ ಅದೇ ಆಗುತ್ತಿದೆ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ ಹೆಚ್‌ಡಿಕೆ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ಅವರ ವಿರುದ್ಧ ತನಿಖೆ ಮಾಡಬೇಕು ಎಂದು ಸವಾಲು ಹಾಕಿದ ಅವರು ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.