ಬೆಂಗಳೂರು : ಬೆಂಗಳೂರಲ್ಲಿ ಮಹಿಳೆಯರಿಗೆ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಮುಕರಿಂದ ಮಹಿಳೆಯರು ಮತ್ತು ಯುವತಿಯರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಬ್ಯೂಟಿಷಿಯನ್ ಯುವತಿಗೆ ಆಟೋ ಚಾಲಕನೊಬ್ಬ ಖಾಸಗಿ ಅಂಗ ತೋರಿಸಿ ವಿಕೃತಿ ಮರಿದಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ಹೌದು ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಯುವತಿಗೆ ಆಟೋ ಚಾಲಕ ಒಬ್ಬ ಯುವತಿಯನ್ನು ಮಾತ್ರ ಗುರಿಯಾಗಿಸಿಕೊಂಡು, ಆಕೆಯ ಹಿಂದೆ ಬಿದ್ದು ಹೀಗೆ ಖಾಸಗಿ ಅಂಗಾಂಗ ತೋರಿಸಿರುವುದು ಬೆಳಕಿಗೆ ಬಂದಿದೆ. ಅದೂ ಕೂಡ ಹಾಡ ಹಗಲೇ ತೀರಾ ವಿಕೃತಿಯ ರೀತಿಯಲ್ಲಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.
ಯುವತಿ ಮಧ್ಯಾಹ್ನ ಊಟಕ್ಕೆಂದು ತಾನು ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್ ನಿಂದ ಸಮೀಪದಲ್ಲಿರುವ ಮನೆಗೆ ಹೋಗಿ ಬರುತ್ತಾಳೆ. ಯುವತಿಯ ಎಲ್ಲ ಚಟುವಟಿಕೆಗಳನ್ನು ಗಮನಿಸಿದ ಆಟೋ ಚಾಲಕ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಆಕೆಯ ಬೆನ್ನು ಬಿದ್ದು ತನ್ನ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ. ಈ ವೇಳೆ ಯುವತಿ ಆಟೋ ಚಾಲಕನಿಗೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಕೂಡಲೇ ಅಲ್ಲಿಂದ ಪರಾರಿ ಆಗಿದ್ದಾನೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ ಮತ್ತೆ ವಾಪಸ್ ಬಂದು ಯುವತಿ ಬ್ಯೂಟಿ ಪಾರ್ಲರ್ಗೆ ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ ಆಟೋ ನಿಲ್ಲಿಸಿ ಮತ್ತೆ ಅದೇ ರೀತಿ ದುರ್ವರ್ತನೆ ತೋರಿದ್ದಾನೆ. ಇದರಿಂದ ಯುವತಿ ಬೆಚ್ಚಿಬಿದ್ದು ಕಿರುಚಾಡಿದ್ದಾಳೆ. ಯುವತಿ ಕಿರುಚೋದನ್ನ ನೋಡಿ ಸ್ಥಳೀಯರು ಆಗಮಿಸುತ್ತಿದ್ದಂತೆ ವಿಕೃತ ಕಾಮಿ ಆಟೋ ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಅಪರಿಚಿತ ಆಟೋ ಚಾಲಕನ ಮೇಲೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾಳೆ.