ಬೆಂಗಳೂರು : ಇಡಿ ದೇಶವೇ ಬೆಚ್ಚಿಬೀಳಿಸುವಂತೆ ಬೆಂಗಳೂರಿನಲ್ಲಿ ವಯಾಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಕೊಲೆಗೆ ಸಂಬಂಧಪಟ್ಟಂತೆ ಹಲವು ಮಾಹಿತಿಗಳನ್ನು ತಿಳಿಸಿದ್ದಾರೆ.
ಈ ಕುರಿತಾಗಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್ ರಾಯ್ ಬಜಾಜ್ ಪ್ಲಾಟಿನಂ ಬೈಕ್ನಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ 1,550 ಕಿಮೀ ಸಾಗಿ ತನ್ನ ಊರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದಾನೆ. ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ. ಮಹಾಲಕ್ಷ್ಮೀ ಕೊಲೆ ಮದುವೆ ವಿಚಾರವಾಗಿ ನಡೆದಿದೆ ಎಂಬ ಅಂಶ ತಿಳಿದು ಬಂದಿದೆ.ಆದರೆ, ಇದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ತನಿಖೆ ಮುಂದುವರೆದಿದೆ.
ಕೊಲೆ ಮಾಡಿದ ಆರೋಪಿ ಮುಕ್ತಿ ರಂಜನ್ ರಾಯ್ ಒರಿಸ್ಸಾದ ಭದ್ರಪ್ ಜಿಲ್ಲೆಯ ದುಸ್ತ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಡ್ ದೊರೆತಿದೆ. ಆರೋಪಿಯ ತಮ್ಮ ಬೆಂಗಳೂರುನಲ್ಲೇ ಇದ್ದಾರೆ. ಅವರ ಹೇಳಿಕೆಯನ್ನು ಕೂಡ 164 ಅಡಿಯಲ್ಲಿ ದಾಖಲು ಮಾಡಲಾಗುತ್ತದೆ. ಆರೋಪಿಯ ಆತ್ಮಹತ್ಯೆ ಬಗ್ಗೆ ಮಾಹಿತಿ ಸಿಗಬೇಕಿದೆ ಎಂದು ಹೇಳಿದರು.
ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್ ಮೊದಲು ಹೆಬ್ಬಗೋಡಿಯ ಸಹೋರನ ಮನೆಗೆ ತೆರಳಿದ್ದನು. ತಮ್ಮನಿಗೆ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿ, ಯಾರಿಗೂ ಈ ವಿಚಾರ ಹೇಳಬೇಡ ಬೇಗ ರೂಮ್ ಖಾಲಿ ಮಾಡು ಎಂದು ಹೇಳಿ ಬೈಕ್ನಲ್ಲೇ ಒಡಿಶಾಗೆ ತೆರಳಿದ್ದಾನೆ. ಊರಿಗೆ ತಲುಪಿದ ಬಳಿಕ ಆರೋಪಿ ರಂಜನ್ ಕೊಲೆ ಮಾಡಿದ ವಿಚಾರವನ್ನು ತಾಯಿಗೆ ತಿಳಿಸಿದ್ದಾನೆ. ಕೊನೆಯದಾಗಿ ತಂದೆ-ತಾಯಿಯನ್ನು ಭೇಟಿಯಾಗಿ, ಆರೋಪಿ ಮುಕ್ತಿ ರಂಜನ್ ನೇಣಿಗೆ ಶರಣಾಗಿದ್ದಾನೆ.