ಮೈಸೂರು : ಮುಡಾ ಹಗರಣ ಸಂಬಂಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗುವ ಸಾಧ್ಯತೆ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದಾರೆ.
ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಆಡಳಿತದಲ್ಲಿ ತಲೆಹಾಕಬಾರದು, ರಾಜ್ಯಪಾಲರ ಯಾವ ಪತ್ರಗಳಿಗೂ ಸಿಎಸ್ ಉತ್ತರಿಸಬಾರದು. ಎಲ್ಲಾ ಕಡೆಯು ಸಿಬಿಐ, ಇಡಿ, ರಾಜ್ಯಪಾಲರ ಕಚೇರಿ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಾನು ಯಾಕೆ ರಾಜೀನಾಮೆ ಕೊಡಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಬರಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಹೇಳಿದ್ದಾರೆ.