ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಯಾವುದೇ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿಲ್ಲ ಎಂದು ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಹೇಳಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.
“ರಾಜೀನಾಮೆಗೆ ಒತ್ತಾಯಿಸುವ ಪ್ರಶ್ನೆಯೇ ಇಲ್ಲ. ಇದು ಮುಖ್ಯಮಂತ್ರಿ ವಿರುದ್ಧದ ರಾಜಕೀಯ ಪಿತೂರಿ. ಅದರಲ್ಲಿ (ಪ್ರಕರಣ) ಯಾವುದೇ ಬಲವಿಲ್ಲ. ಅವರು (ವಿರೋಧ ಪಕ್ಷಗಳು) ಅನಗತ್ಯವಾಗಿ ರಾಜಕೀಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ” ಎಂದು ಶಿವಕುಮಾರ್ ಪಿಟಿಐಗೆ ತಿಳಿಸಿದ್ದಾರೆ. “ನಾವು ಬದ್ಧರಾಗಿದ್ದೇವೆ. ನಾವು ಅವರನ್ನು (ಸಿದ್ದರಾಮಯ್ಯ) ಬೆಂಬಲಿಸುತ್ತೇವೆ. ಅವರ ರಾಜೀನಾಮೆಯ ಪ್ರಶ್ನೆಯೇ ಇಲ್ಲ” ಎಂದು ಅವರು ಹೇಳಿದರು.
ಕೆಲವು ನಾಯಕರು ಸಿಎಂ ಹುದ್ದೆಗೆ ಹಕ್ಕು ಮಂಡಿಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದಾಗ ಅದನ್ನು ಅವರು ನಿರಾಕರಿಸಿದರು.