ಬೆಂಗಳೂರು : ಸರ್ಕಾರದ ವಿವಿಧ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಲ್ಲಿ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಮಾರ್ಪಾಡುಗಳನ್ನು ತರುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸಲು ಹಾಗೂ ಅಭ್ಯರ್ಥಿಗಳಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ನಿವಾರಿಸಲು ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅನುಚ್ಛೇದ-371-ಜೆ ಅನುಷ್ಟಾನ ಕುರಿತಾದ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ವತಿಯಿಂದ ವಿವಿಧ ನೇಮಕಾತಿಗಳ ಹಂತ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಮೂಲಕ ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ಆಯ್ಕೆ ವಿಧಾನಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವ ಅವಶ್ಯಕತೆಯಿದೆ ಎಂಬ ಸಲಹೆಗಳನ್ನು ಒಳಗೊಂಡ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದರು.
ನೇಮಕಾತಿ ಪ್ರಾಧಿಕಾರಗಳು ನೇಮಕಾತಿ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು, ಎಲ್ಲಾ ಇಲಾಖೆಗಳಿಗೆ ಅವಶ್ಯವಾದ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಗಳು ಒಂದೇ ಪರೀಕ್ಷೆಯನ್ನು ನಡೆಸಬೇಕು, OMR ಆಧಾರಿತ ಲಿಖಿತ ಪರೀಕ್ಷೆಯ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪರಿಚಯಿಸಬೇಕು, ಸಹಾಯವಾಣಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಅಭ್ಯರ್ಥಿಗಳಿಗೆ ನಿಖರ ಮಾಹಿತಿ ಸಿಗುವಂತೆ ಮಾಡಬೇಕು ಎಂಬ ಉಪಯುಕ್ತ ಸಲಹೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದರು.
ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಗಳ ನಡುವಿನ ದಿನಾಂಕಗಳು ಕಾಕತಾಳೀಯವಾಗಿ ಒಮ್ಮೆಲೆ ಬರುವ ಕಾರಣದಿಂದ ವಿವಿಧ ಪರೀಕ್ಷೆಯ ದಿನಾಂಕಗಳನ್ನು ಅನೇಕ ಬಾರಿ ಪರಿಷ್ಕರಿಸಲಾಗಿದೆ. ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳ ನಡುವೆ ಸಂವಹನವನ್ನು ಖಾತ್ರಿಪಡಿಸುವ ಅವಶ್ಯಕತೆ ಇದ್ದು, ಅಭ್ಯರ್ಥಿಗಳು ಅವರು ಅರ್ಹರಾಗಿರುವ ಎಲ್ಲಾ ಪರೀಕ್ಷೆಗಳಲ್ಲಿಯೂ ಬರೆಯುವ ಹಕ್ಕನ್ನು ಎತ್ತಿಹಿಡಿಯಬೇಕು ಎಂದೂ ಹೇಳಿದ ಸಚಿವರು ಒಂದೇ ದಿನ ನಡೆಸುವ ಎರಡು ಬೇರೆ ಬೇರೆ ಪರೀಕ್ಷೆಗಳಿಗೆ ಎರಡು ವಿವಿಧ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವದನ್ನು ತಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಹೇಳಿದರು.
ಒಂದಕ್ಕೆ ಒಂದರ ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ದಾಖಲೆ ಪರಿಶೀಲನೆಗೆ ಸುಮಾರು ಆರು ತಿಂಗಳು ತೆಗೆದುಕೊಳ್ಳುತ್ತಿದ್ದು, ಪ್ರಕ್ರಿಯೆಯನ್ನು ವೇಗಗೊಳಿಸಲು ಎಲ್ಲ ದಾಖಲೆಗಳನ್ನು ಕಂದಾಯ ವಿಭಾಗ ಸಂಖ್ಯೆ (RD ಸಂಖ್ಯೆ) ಬಳಕೆ ಮಾಡುವ ಮೂಲಕ ಪಡೆಯಬಹುದು ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕಗಳು ದುಬಾರಿಯಾಗಿದ್ದು ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ.
ಪ್ರಾಧಿಕಾರ ನಡೆಸುತ್ತಿರುವ ಪರೀಕ್ಷಾ ವಿಧಾನವನ್ನು ಬದಲಿಸಿ ಲೋಕಸೇವಾ ಆಯೋಗ ನಿಗದಿ ಮಾಡಿರುವ ಆದ್ಯತೆಯನ್ನು ಅನುಸರಿಸಬೇಕು ಎಂದೂ ಸಚಿವರು ತಿಳಿಸಿದ್ದಾರೆ.ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಕನ್ನಡದಲ್ಲಿ ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆಯು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕಡಿಮೆಯಾಗುತ್ತಿದ್ದು ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ಮಾಡಿದ್ದಾರೆ.