ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಆಗಿರುವ ನಟಿ ಪವಿತ್ರ ಗೌಡ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಈ ಒಂದು ಅರ್ಜಿ ವಿಚಾರಣೆ ನಡೆಸಿದ ಜಡ್ಜ್ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎಂದು ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದಂದು ಪಟ್ಟಣಗೆರೆ ಶೆಡ್ನಲ್ಲಿ ನಟ ದರ್ಶನ್ ಸೇರಿದಂತೆ ಆತನ ಸಹಚರರು ಸೇರಿ ರೇಣುಕಾ ಸ್ವಾಮಿಯನ್ನು ಭೀಕರವಾಗಿ ಕೊಂದಿದ್ದರು. ಈ ಒಂದು ಕೊಲೆಯಲ್ಲಿ ಪವಿತ್ರ ಗೌಡ ಸೇರಿದಂತೆ ನಟ ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಬಟ್ಟೆಯ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಹಾಗೂ ಪವಿತ್ರ ಗೌಡ ಚಪ್ಪಲಿಯಲ್ಲೂ ರೇಣುಕಾ ಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ಉಲ್ಲೇಖಿಸಿ ಕೋರ್ಟಿಗೆ ಸಲ್ಲಿಸಿದರು. ಬಳಿಕ ನಟ ದರ್ಶನ್, ಪವಿತ್ರ ಗೌಡ ಶ್ರೀಗಂಧ ಪ್ರಕರಣದ ಹಲವು ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಎರಡು ದಿನಗಳ ಹಿಂದೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಆ ಮೂರು ಆರೋಪಿಗಳು ಇನ್ನೂ ಜೈಲಿನಲ್ಲಿ ಇದ್ದಾರೆ. ಇನ್ನು ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27 ರಂದು ನಡೆಯಲಿದೆ. ಹಾಗಾಗಿ ನಟ ದರ್ಶನ್ ಅವರ ಭವಿಷ್ಯ ಸೆಪ್ಟೆಂಬರ್ 27ರಂದು ನಿರ್ಧಾರವಾಗಲಿದೆ.