ಮೈಸೂರು : ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾಗಿದ್ದರು, ಜನರು ಎಷ್ಟೇ ಮುಂದುವರೆದಿದ್ದರೂ ಸಹ ಹಳ್ಳಿಯ ಪ್ರದೇಶಗಳಲ್ಲಿ ಇನ್ನೂ ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ಆಚರಿಸುವುದನ್ನು ನಾವು ಕಾಣುತ್ತೇವೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಹೌದು ಸ್ವಾಮಿ (48) ಬಹಿಷ್ಕಾರಕ್ಕೆ ಮನನೊಂದು ಸಾವಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ವಾಮಿ ಹಾಗೂ ಕುಟುಂಬದ ಮೇಲೆ ಸಮುದಾಯದ ಹಾಗೂ ಗ್ರಾಮದ ಮುಖಂಡರು ಬಹಿಷ್ಕಾರ ಹೇರಿದ್ದರು. ಒಂದು ಲಕ್ಷ ದಂಡ ಕಟ್ಟಿದರೆ ಬಹಿಷ್ಕಾರ ತೆರವುಗೊಳಿಸುವುದಾಗಿ ಷರತ್ತು ವಿಧಿಸಿದ್ದರು. ಹೀಗಾಗಿ ಸ್ವಾಮಿ ಕುಟುಂಬದ ಜೊತೆ ಗ್ರಾಮಸ್ಥರ ಸಂಪರ್ಕ ಕಡಿದು ಹೋಗಿತ್ತು.
ತನ್ನ ಮೇಲಿರುವ ಬಹಿಷ್ಕಾರ ತರವುಗೊಳಿಸಿ ಎಂದು ಅನೇಕ ಬಾರಿ ಸ್ವಾಮಿ ಗ್ರಾಮದ ಹಿರಿಯರಲ್ಲಿ ಮನವಿ ಮಾಡಿದರು ಸಹ ಯಾವುದೇ ಉಪಯೋಗವಾಗಿಲ್ಲ. ಹಾಗಾಗಿ ಮದ್ಯದಲ್ಲಿ ಮಾತ್ರೆ ಬೆರೆಸಿ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಚೆನ್ನಪಟ್ಟಣ ಗ್ರಾಮದ ತಾಯಮ್ಮ, ಶಿವರಾಜು, ತಿಮ್ಮ ಬೋವಿ, ಕಣ್ಣ ಮತ್ತು ನಿಂಗರಾಜ ಕಾರಣ ಎಂದು ಸ್ವಾಮಿ ತಾಯಿ ತಿಮ್ಮಮ್ಮ ನೇರವಾಗಿ ಆರೋಪಿಸಿದ್ದಾರೆ.
ಇನ್ನೊಂದು ದುರಂತದ ವಿಷಯವೆಂದರೆ ಅಂತ್ಯ ಸಂಸ್ಕಾರಕ್ಕೂ ಆಗಮಿಸದ ಸಮುದಾಯದ ಜನ ಅಮಾನೀಯವಾಗಿ ವರ್ತಿಸಿದ್ದಾರೆ. ಮೃತದೇಹವನ್ನು ಜಮೀನಿನ ಮನೆಯಲ್ಲಿ ಇರಿಸಿ ಕೇವಲ ಸಂಬಂಧಿಕರೇ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ತಂತ್ರಜ್ಞಾನ, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇಂತಹ ಅನಿಷ್ಟ ಪದ್ದತಿಗಳಿಂದ ನಮ್ಮ ಜನರು ಇನ್ನೂ ಹೊರ ಬಾರದಿರುವುದೇ ಶೋಚನೀಯವಾಗಿದೆ.