ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರಿ ಹಿನ್ನಡೆಯಾಗಿದ್ದು, ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಇದೀಗ ಈ ಒಂದು ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಯಾವಾಗಲೂ ರಾಮಕೃಷ್ಣ ಹೆಗಡೆ ಅವರ ಶಿಷ್ಯ ಅಂತಾರಲ್ಲ ಅವರ ಮೇಲೆ ಆಪಾದನೆ ಬಂದಾಗ, ಅವರು ಒಂದು ಕ್ಷಣ ಯೋಚಿಸದೆ ರಾಜೀನಾಮೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ಕೂಡ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈ ಆದೇಶವನ್ನು ಗೌರವಿಸಿ ಸ್ವಾಗತ ಮಾಡುತ್ತಿದ್ದೇನೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ ನಾವು ವಿಧಾನಸಭೆ ಒಳಗಡೆ ನಿಲುವಳಿ ಸೂಚನೆ ಮೂಲಕ ಹೋರಾಟ ಪ್ರಾರಂಭಿಸಿದ್ದೇವೆ. ಸರ್ಕಾರ ಅದಕ್ಕೆ ಮಣಿಯದೆ ಇದ್ದಾಗ ಅಹೋರಾತ್ರಿ ಧರಣೆ ಮಾಡಿ ಒತ್ತಡ ಹಾಕಿದ್ದೇವೆ. ಅಲ್ಲದೆ ಪಾದಯಾತ್ರೆ ಕೂಡ ಮಾಡಿದ್ದೇವೆ ಈಗ ಹೈಕೋರ್ಟ್ ಮುಖಾಂತರ ನಮಗೆ ನ್ಯಾಯ ದೊರಕಿದೆ ಸತ್ಯ ಗೆದ್ದಿದೆ.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳ ಸರ್ಕಾರ. ಒಂದೇ ವರ್ಷದಲ್ಲಿ ಈ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು ಕರ್ನಾಟಕ ಇತಿಹಾಸದಲ್ಲಿ ಇಲ್ಲ. ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಕರ್ನಾಟಕ ಜನರ ಮನಸ್ಸಿನಲ್ಲಿ ಈ ಸರ್ಕಾರ ಲೂಟಿಕೋರರ ಸರ್ಕಾರ. ಜನರಿಗೆ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬರಿ ಲೂಟಿಗೆ ಇಳಿದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ರಾಮಕೃಷ್ಣ ಅವರ ಹೆಗಡೆ ಶಿಷ್ಯ ಅಂತಾರೆ. ಅವರ ಮೇಲೆ ಆಪಾದನೆ ಬಂದಾಗ ಒಂದು ಕ್ಷಣ ಯೋಚಿಸದೆ ರಾಜೀನಾಮೆ ಕೊಟ್ಟರು.ಹಾಗೆ ಒಂದು ಕ್ಷಣ ಯೋಚನೆ ಮಾಡದೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅನ್ನೋ ವಿಶ್ವಾಸ ನಮಗೆ ಇದೆ. ರಾಜೀನಾಮೆ ಕೊಟ್ಟವರು ಯಾವ ಬೆಂಚಿಗೆ ಆದರೂ ಹೋಗಲಿ ಭ್ರಷ್ಟಾಚಾರ ಮಾಡಿದೆ ಎಂದು ಹೈಕೋರ್ಟ್ ನಲ್ಲಿ ಗೊತ್ತಾಗಿದೆ. ಕಾನೂನು ಬಿಡಿ ಜನತಾ ನ್ಯಾಯಾಲಯದಲ್ಲಿ ಏನು ಹೇಳ್ತೀರಾ? ಜನಕ್ಕೆ ಏನು ಉತ್ತರಿಸುತ್ತೀರಾ? ಜನತಾ ನ್ಯಾಯಾಲಯದ ಮುಂದೆ ತಲೆಬಾಗಲೇಬೇಕು. ರಾಜಿನಾಮೆ ನೀಡುವುದು ಒಳ್ಳೆಯದು ಎಂದರು.