ಬೆಂಗಳೂರು : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ. ಯಾರೇ ಆ ಒಂದು ಪ್ರಸಾದ ತಂದು ಕೊಟ್ಟರೂ ಸಹ ಪ್ರತಿಯೊಬ್ಬರೂ ಕಣ್ಣಿಗೆ ಒತ್ತಿಕೊಂಡು ತಿನ್ನುವಂತಹ ಒಂದು ಸಂಪ್ರದಾಯ, ಪದ್ಧತಿ ಇದೆ. ಆದರೆ ಈ ಒಂದು ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಬಳಸುತ್ತಿರುವ ವಿಚಾರ ಕೇಳಿ ಇಡೀ ದೇಶದ ಜನತೆ ಬೆಚ್ಚಿ ಬಿದ್ದಿದೆ. ಇದೀಗ ತಿರುಪತಿ ಲಡ್ಡುವನ್ನು ರಾಜ್ಯದ ದೇವಸ್ಥಾನಗಳಲ್ಲಿ ಬಳಸದಿರಲು ಅಖಿಲ ಕರ್ನಾಟಕ ಅರ್ಚಕರ ಸಂಘವು ತೀರ್ಮಾನಿಸಿದೆ.
ಹೌದು ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನೆಣ್ಣೆ ಸೇರಿದಂತೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಈ ಗೊಂದಲದ ಬೆನ್ನಲ್ಲೇ ರಾಜ್ಯದ ಅರ್ಚಕರೆಲ್ಲ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.ಇನ್ನು ಮುಂದೆ ತಿರುಪತಿ ಲಡ್ಡು ಪ್ರಸಾದವನ್ನು ಇಲ್ಲಿನ ದೇವಸ್ಥಾನಗಳಲ್ಲಿ ಬಳಸದಿರಲು ಅಖಿಲ ಕರ್ನಾಟಕ ಅರ್ಚಕರ ಸಂಘ ತೀರ್ಮಾನಿಸಿದೆ.
ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ನಡೆದಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುವರೆಗೂ ಪ್ರಸಾದವನ್ನು ನಾವು ಯಾರೂ ಬಳಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯದ ಮುಖ್ಯ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಕಲ್ಯಾಣೋತ್ಸವ, ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ತಿರುಪತಿಯ ಲಡ್ಡು ಪ್ರಸಾದವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತಿತ್ತು.
ಆದರೆ, ಇದೀಗ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವ ಆರೋಪ ಕೇಳಿ ಬಂದಿರುವ ಕಾರಣ ಲಡ್ಡು ಪ್ರಸಾದವನ್ನು ಬಳಸದಿರಲು ಅರ್ಚಕರು ಈ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಬಳಸುತ್ತಿರುವ ವಿಚಾರ ಬಹಿರಂಗವಾಗುತ್ತಿದ್ದಂತೆ, ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲ ದೇವಾಲಯಗಳಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿದೆ.