ಬೆಂಗಳೂರು : ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವ ಆರೋಪದ ವಿವಾದದ ಬೆನ್ನಲ್ಲೆ ಇದೀಗ ಕರ್ನಾಟಕದ ಬ್ರಾಂಡ್ ಆಗಿರುವಂತಹ ನಂದಿನಿ ತುಪ್ಪಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದ್ದು, ಅಲ್ಲದೆ TTD ಲಡ್ಡು ತಯಾರಿಕೆಗೆ ಮತ್ತಷ್ಟು ತುಪ್ಪ ಪೂರೈಸುವಂತೆ ಇಮೇಲ್ ಮೂಲಕ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಹೌದು ಈ ಕುರಿತು ಕೆಎಂಎಫ್ ಎಂಡಿ ಜಗದೀಶ್ ರವರು ಪ್ರತಿಕ್ರಿಯೆ ನೀಡಿ, ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ನಡೆಯುತ್ತಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ತುಪ್ಪ ತಯಾರಿಸಲು ಸಿದ್ಧತೆ ನಡೆಯುತ್ತಿದೆ. ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತೆ ಎಂದರು.
ಅಲ್ಲದೆ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ GPS ಟ್ರ್ಯಾಕ್, ಎಲೆಕ್ಟ್ರಿಕ್ ಡೋರ್ ವ್ಯವಸ್ಥೆ ಮಾಡಿಸಲಾಗುತ್ತಿದೆ. ಲ್ಯಾಬ್ ಟೆಸ್ಟ್ ಮಾಡಿದ ಬಳಿಕ ನಂದಿನಿ ತುಪ್ಪ ಪೂರೈಸಲಾಗುತ್ತೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಕೆ ಮಾಡ್ತಿದ್ದೇವೆ.ಇಂದು ತಿಮ್ಮಪ್ಪನ ಕೃಪೆಯಿಂದ ಹೆಚ್ಚು ತುಪ್ಪ ಪೂರೈಕೆ ಮಾಡುತ್ತಿದ್ದೇವೆ. ಇದು ಕೆಎಂಎಫ್ನ ಹೆಮ್ಮೆಯ ವಿಚಾರ ಎಂದು ತಿಳಿಸಿದರು.