ಮೈಸೂರು : ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಮುಡಾ ಹಣ ಬಳಕೆಯಾಗುತ್ತಿದೆ ಅದರಲ್ಲಿ ತಪ್ಪೇನು?ಎಂದು ಪ್ರಶ್ನಿಸಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳಲ್ಲಿ ಯಾವುದೇ ಲೋಪಗಳಿಲ್ಲ. ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೀಮಿತಕ್ಕೆ ಒಳಪಡುವ ಪ್ರದೇಶಗಳಲ್ಲಿಯೇ ಅಭಿವೃದ್ಧಿಗೆ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಪ್ರಾಧಿಕಾರದ ಹಣವನ್ನು ಜನರ ಅಭಿವೃದ್ಧಿಗೆ ಬಳಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಮೇಲೆ ಆರೋಪ ಮಾಡಲು ಹಾಗೂ ಮಾತನಾಡಲು ಯಾವ ವಿಷಯಗಳೂ ಸಿಗುತ್ತಿಲ್ಲ. ಜನರ ಖಾತೆಗಳಿಗೆ ಗ್ಯಾರಂಟಿ ಯೋಜನೆ ಮೂಲಕ ಹಣ ಹಾಕುತ್ತಿರುವ ಸರ್ಕಾರ ನಮ್ಮದು. ಇಂತಹ ಯೋಜನೆಗಳನ್ನ ಸಹಿಸಲು ಆಗದವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.
ಅದು ಅಲ್ಲದೆ ನಮ್ಮ ತಂದೆಯ ರಾಜೀನಾಮೆ ಕೇಳುತ್ತಿದ್ದಾರೆ. ಎಲ್ಲ ಆರೋಪಗಳಿಗೂ ರಾಜೀನಾಮೆ ಕೊಡುತ್ತಾ ಹೋದರೆ ಇದರಲ್ಲಿ ಅರ್ಥ ಏನು? ಆದ್ದರಿಂದ ನಮ್ಮ ಸಿದ್ದರಾಮಯ್ಯ ವಿರುದ್ದ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.