ಚನ್ನಪಟ್ಟಣ : 2,069 ಅರ್ಜಿದಾರರಿಗೆ ನಿವೇಶನ, 2,300 ವಸತಿ ವಿತರಣೆ ಹಾಗೂ 200 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಚನ್ನಪಟ್ಟಣವನ್ನು ಚಿನ್ನದ ಪಟ್ಟಣ ಮಾಡುವ ಸಂಕಲ್ಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಿದರು.
ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಟ್ಟೆಕೆರೆಯ ಕುಡಿಯುವ ನೀರಿನ ಕಟ್ಟೆ ಬಳಿ ಸುಮಾರು ₹9 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ಮೂಲಕ ಡಿಸಿಎಂ ತಮ್ಮ ಅಭಿವೃದ್ಧಿಯ ಅಭಿಯಾನ ಪ್ರಾರಂಭ ಮಾಡಿದರು.
ನಂತರ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ರಹೀಮ್ ಖಾನ್ ಅವರೊಡಗೂಡಿ ಹಜರತ್ ಸೈಯದ್ ಮೊಹಮ್ಮದ್ ಆಖೀಲ್ ಶಾ ಖಾದ್ರಿ ಅಲ್- ಬಾಗ್ದಾದಿ ದರ್ಗಾಕ್ಕೆ ಭೇಟಿ ನೀಡಿ ಚಾದರ ಹೊದಿಸಿ ಪ್ರಾರ್ಥನೆ ಮಾಡಿದರು.
ಜನ ಪ್ರತಿನಿಧಿಯೇ ಇಲ್ಲದೇ ಅನಾಥವಾಗಿದ್ದ ಚನ್ನಪಟ್ಟಣ ಕ್ಷೇತ್ರಕ್ಕೆ ಭಗೀರಥನಂತೆ ಬಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು. ಅಭಿವೃದ್ಧಿಯನ್ನೇ ಕಾಣದ ಕ್ಷೇತ್ರದಲ್ಲಿ ಸಂಚಾರ ಮಾಡಿ “ಮನೆಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ಮೂಲಕ ಜಿಲ್ಲೆಯ ಅಧಿಕಾರಿ ವರ್ಗವನ್ನು ಬೆನ್ನಿಗೆ ಕಟ್ಟಿಕೊಂಡು ಪ್ರತಿ ಜಿಲ್ಲಾ ಪಂಚಾಯತಿಯಲ್ಲೂ ಕಾರ್ಯಕ್ರಮ ಮಾಡಿ ಸಾರ್ವಜನಿಕರ ಅಹವಾಲು ಆಲಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 9,731 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇವುಗಳಲ್ಲಿ ನಿವೇಶನ ಕೋರಿ ಬಂದಂತಹ 8,112 ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ 6,660 ಅರ್ಜಿಗಳ ತಾತ್ಕಾಲಿಕ ವಸತಿ ರಹಿತರ ಪಟ್ಟಿ ತಯಾರಿಸಲಾಯಿತು. ಇದರಲ್ಲಿ ಪೂರ್ಣ ದಾಖಲೆಗಳನ್ನು ಸಲ್ಲಿಸಿದ ಗ್ರಾಮೀಣ ಹಾಗೂ ನಗರ ಭಾಗದ 2,069 ಜನರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ.
ಚನ್ನಪಟ್ಟಣ ನಗರ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಐಡಿಎಸ್ ಎಸ್ ಎಂಟಿ (IDSSMT) ಲೇಔಟ್ ಬಳಿ 10 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ನಿವೇಶನಗಳನ್ನು ವಿತರಿಸಲು ಲಾಟರಿ ಮೂಲಕ ಫಲನುಭವಿಗಳನ್ನು ಆಯ್ಕೆ ಮಾಡಿ 300 ನಿವೇಶನ ಹಾಗೂ ಪಟ್ಲು ಗ್ರಾಮದಲ್ಲಿ 500 ನಿವೇಶನಗಳು ನಗರ ಆಶ್ರಯ ಸಮಿತಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹಂಚಲಾಯಿತು.
ಇದರ ಜೊತೆಗೆ 2,300 ಮನೆಗಳನ್ನು ವಸತಿ ರಹಿತರಿಗೆ ಬಸವ ವಸತಿ ಯೋಜನೆ & ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳ ಸಂಖ್ಯೆ 339, ಪರಿಶಿಷ್ಟ ಪಂಗಡ 39, ವಿಶೇಷ ಚೇತನರು 41, ಅಲ್ಪಸಂಖ್ಯಾತರು 990, ಇತರೆ ವರ್ಗದ 660 ಜನರನ್ನು ಆಯ್ಕೆ ಮಾಡಲಾಗಿದೆ.
ಸರಣಿ ಶಂಕುಸ್ಥಾಪನೆಗಳ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದ ಡಿಸಿಎಂ
ಲೋಕೋಪಯೋಗಿ ಇಲಾಖೆಯಿಂದ ಪೆಟ್ಟಾ ಶಾಲೆಯ ಬಳಿ ರೂ 5 ಕೋಟಿ ವೆಚ್ಚದಲ್ಲಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಹಾಗೂ ಮದೀನಾ ಚೌಕ್ ನಲ್ಲಿ ಅಲ್ಪಸಂಖ್ಯಾತರ 14 ವಾರ್ಡ್ ಗಳಲ್ಲಿ ರಸ್ತೆಯ ಅಭಿವೃದ್ಧಿಗೆ ಸುಮಾರು ರೂ16 ಕೋಟಿ ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಟಿಪ್ಪು ಸುಲ್ತಾನ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಬರುವ 21 ಅಂಗವಿಕಲ ಫಲಾನುಭವಿಗಳಿಗೆ ಅಲ್ಪಸಂಖ್ಯಾತ ಅಭಿವೃದ್ದಿ ಇಲಾಖೆಯಿಂದ ಹೊಲಿಗೆ ಯಂತ್ರ, ಇತರೆ ಸೌಲಭ್ಯಗಳ ಹಾಗೂ ಸಾರಥಿ ಯೋಜನೆಯಲ್ಲಿ 25 ಫಲಾನುಭವಿಗಳಿಗೆ ಆಟೋ ಮತ್ತು ಕಾರು ಖರೀದಿಸಲು ಸಹಾಯಧನ ಮಂಜೂರಾತಿ ಪತ್ರ ಹಂಚಿಕೆ ಮಾಡಲಾಯಿತು.
ಡಿಸಿಎಂ ಅವರು ಗುದ್ದಲಿ ಪೂಜೆ ನೆರವೇರಿಸಿದ ಇತರೇ ಕಾಮಗಾರಿಗಳು
ಮಂಗಳವಾರಪೇಟೆಯಲ್ಲಿ ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ ವಾರ್ಡ್‌ಗೆ ತಲಾ ರೂ 1 ಕೋಟಿಯಂತೆ 31 ವಾರ್ಡ್‌ಗಳಲ್ಲಿ 31 ಕೋಟಿ ವೆಚ್ಚದಲ್ಲಿ ರಸ್ತೆ & ಚರಂಡಿ ಅಭಿವೃದ್ದಿ ಕಾಮಗಾರಿ.
ಅಂಬೇಡ್ಕರ್ ನಗರದಲ್ಲಿ ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ ಪಟ್ಟಣದ 14 ವಾರ್ಡ್ ಗಳಲ್ಲಿ ರಸ್ತೆ & ಚರಂಡಿ ಅಭಿವೃದ್ದಿ ಕಾಮಗಾರಿ.
ರೂ 10 ಕೋಟಿ ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ. ನಗರಸಭಾ ವ್ಯಾಪ್ತಿಯ (KUWS & DB ಯಿಂದ) ಶೆಟ್ಟಿಹಳ್ಳಿಯ 7 ನೇ ವಾರ್ಡ್, ಚರ್ಚ್ ರೋಡಿನಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆ -2 ರ ಅಡಿ ಹಾಲಿ ಇರುವ ನಗರ ನೀರು ಸರಬರಾಜು ಯೋಜನೆಯನ್ನು 35 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ಚನ್ನಪಟ್ಟಣಕ್ಕೆ ರಾಜಕೀಯ ಮಾಡಲು ಬಂದಿಲ್ಲ
“ಇಡೀ ಸರ್ಕಾರ ಚನ್ನಪಟ್ಟಣದ ಬದಲಾವಣೆಗೆ ಪಣ ತೊಟ್ಟಿದೆ. ನಾವು ಚನ್ನಪಟ್ಟಣಕ್ಕೆ ಅಭಿವೃದ್ಧಿಗಾಗಿ ಬಂದಿದ್ದೇವೆ ಹೊರತು ರಾಜಕೀಯ ಮಾಡಲು ಬಂದಿಲ್ಲ. ಜನರ ಬದುಕಿನಲ್ಲಿ ಬದಲಾವಣೆ ಮಾಡಬೇಕು ಎಂಬುದು ನಮ್ಮ ಸಂಕಲ್ಪ. ಈ ಹಿಂದೆ ನಮಗೆ ಈ ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಹೇಳಿದರು.
ಅರ್ಜಿ ಸಲ್ಲಿಸಿದ ಎಲ್ಲರ ಸಮಸ್ಯೆಗಳನ್ನು ಬಗೆಹರಿಸಲಾಗುವುದೇ ಎನ್ನುವ ಪ್ರಶ್ನೆಗೆ “ಎಲ್ಲರ ಸಮಸ್ಯೆಗಳನ್ನು ಹಂತ, ಹಂತವಾಗಿ ಬಗೆಹರಿಸಲಾಗುತ್ತಿದೆ. ವಸತಿ ಸಮಸ್ಯೆ ಪರಿಹಾರ ಮಾಡಲಾಗುತ್ತಿದೆ” ಎಂದರು.
ಚನ್ನಪಟ್ಟಣ ಸ್ಥಳೀಯ ಸಂಸ್ಥೆಯಲ್ಲಿ ಆಪರೇಷನ್ ಕಾಂಗ್ರೆಸ್ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ “ಇದರ ಬಗ್ಗೆ ಆನಂತರ ಮಾತನಾಡುತ್ತೇನೆ” ಎಂದರು.
BREAKING: ಶಾಸಕ ಮುನಿರತ್ನ ವಿರುದ್ಧ ಪ್ರಕರಣದ ತನಿಖೆಗೆ CIDಯ ‘SIT ತಂಡ’ ರಚಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!
BREAKING : ವಾಯುಪಡೆ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ‘ಎ.ಪಿ ಸಿಂಗ್’ ನೇಮಕ |Air Marshal A.P. Singh