ಚಿತ್ರದುರ್ಗ : ತಮ್ಮ ಜಮೀನಲ್ಲಿ ಈರುಳ್ಳಿ ಬೆಳೆ ನೋಡಿಕೊಂಡು ಬರಲು ತೆರಳಿದ್ದ ದಂಪತಿಗಳ ಇಬ್ಬರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಬೊಮ್ಮಕ್ಕನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಈ ಕೊಲೆಯ ಹಿಂದೆ ಅಳಿಯನ ಕೈವಾಡ ಇದೆ ಎಂದು ಇದೀಗ ಶಂಕೆ ವ್ಯಕ್ತವಾಗುತ್ತಿದೆ.
ಹೌದು ಜಮೀನಿನಲ್ಲಿ ಸಾವಿಗೀಡಾದ ಮೃತರನ್ನು ಹನುಮಂತಪ್ಪ (46) ಮತ್ತು ಅವರ ಪತ್ನಿ ತಿಪ್ಪಮ್ಮ (42) ಎಂದು ಗುರುತಿಸಲಾಗಿದೆ. ಪೋಷಕರ ಬರ್ಬರ ಹತ್ಯೆ ಬೆನ್ನಲ್ಲೇ ತುರುವನೂರು ಠಾಣೆಯಲ್ಲಿ ಪುತ್ರಿ ಹರ್ಷಿತಾ ದೂರು ದಾಖಲಿಸಿದ್ದು, ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಎಸಗಿದ್ದಾರೆ.
ವರ್ಷದ ಹಿಂದೆ ಮಂಜುನಾಥ್ ಜತೆ ಹರ್ಷಿತಾ ಮದುವೆ ಆಗಿತ್ತು. ವಿವಾಹ ಆದಾಗಿನಿಂದಲೂ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮಂಜುನಾಥ್ ಮತ್ತು ಕುಟುಂಬಸ್ಥರು ಆಗಾಗ್ಗೆ ನಮ್ಮ ವಿರುದ್ಧ ಗಲಾಟೆ ಮಾಡುತ್ತಿದ್ದರು ಎಂದು ಆಕೆ ದೂರಿದ್ದಾರೆ. ಪತಿ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಒಂದು ತಿಂಗಳ ಹಿಂದಷ್ಟೇ ತಾಯಿ ತಿಪ್ಪಮ್ಮ ಮಗಳನ್ನು ತವರಿಗೆ ಕರೆತಂದಿದ್ದರು ಎಂದು ಹೇಳಲಾಗಿದೆ.
ದ್ವೇಷದಿಂದ ತಂದೆ ಹನುಮಂತಪ್ಪ, ತಾಯಿ ತಿಪ್ಪಮ್ಮಳ ಕೊಲೆ ಮಾಡಲಾಗಿದೆ ಎಂದು ಪುತ್ರಿ ಆರೋಪಿಸಿದ್ದಾರೆ. ಮಂಜುನಾಥ್, ಸಹೋದರ ರಘು, ಸಂಬಂಧಿ ಮಲ್ಲಿಕಾರ್ಜುನ, ಮಂಜುನಾಥನ ತಂದೆ ಚಂದ್ರಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ರಿಜಿಸ್ಟರ್ ಆಗಿದೆ ಎಂದು ವರದಿಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ನಿಗೂಢ ಹತ್ಯೆಯ ಹಿಂದಿನ ಕಾರಣವೇನು ಎಂಬುದನ್ನು ಪರಿಶೀಲಿಸಿದ್ದಾರೆ.ಎಸ್ಪಿ ರಂಜಿತ್ ಬಂಡಾರು, ಡಿವೈಎಸ್ಪಿ ದಿನಕರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಪ್ರಕರಣ ತುರುವನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.