ಬೆಂಗಳೂರು : ಸದ್ಯ ರಾಜ್ಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಭಾರಿ ಚರ್ಚೆ ಆಗುತ್ತಿದ್ದು ಇದೀಗ ಈ ಒಂದು ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಇದೀಗ ಮುಡಾ ಸಂಬಂಧ ಸಲ್ಲಿಕೆಯಾಗಿರುವ ಮತ್ತೊಂದು ದೂರಿನ ಆಧಾರದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲರು ವಿವರ ಕೋರಿದ್ದಾರೆ.
ಹೌದು ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಮೂಲದ ಪಿಎಸ್ ನಟರಾಜ್ ಎಂಬವರು ಆಗಸ್ಟ್ 27ರಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೀಗ ನಟರಾಜ್ ದೂರಿಗೆ ಸಂಬಂಧಿಸಿ ಸರ್ಕಾರದಿಂದ ವರದಿ ಕೇಳಿದ್ದಾರೆ. ಸಿದ್ದರಾಮಯ್ಯ ಮೇಲಿನ ದೂರಿನ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ.
ರಾಜ್ಯಪಾಲರ ಪತ್ರದಲ್ಲೇನಿದೆ?
ಮೈಸೂರಿನ ಪಿಎಸ್ ನಳರಾಜ್ ಎಂಬವರು ದಿನಾಂಕ 27-08-2024 ರಂದು ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದ್ದು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡಿರುತ್ತಾರೆ. ಇದರಲ್ಲಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯಿದೆ 1987ರ ಕಲಂ 15 ಮತ್ತು 25ರ ಅನ್ನು ಉಲ್ಲಂಘಿಸಿ ಸಿಎಂ ಕ್ಷೇತ್ರವಾದ ವರುಣಾ ಹಾಗೂ ಶ್ರೀರಂಗಪಟ್ಟಣದಲ್ಲಿ 387 ಕೋಟಿ ರೂ.ಗಳ ಕಾಮಗಾರಿ ಹಮ್ಮಿಕೊಂಡಿತ್ತು ಎಂದು ಉಲ್ಲೇಖಿಸಲಾಗಿದೆ.
ಪ್ರಾಧಿಕಾರದಲ್ಲಿ ಹಣ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅಲ್ಲದೆ, ಈ ಮೂಲಕ ಪ್ರಾಧಿಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಸಿಬಿಐನಿಂದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.