ಬೆಂಗಳೂರು : ಕೇವಲ ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಜಗಳಗಳು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವಂತಹ ಅನೇಕ ಘಟನೆಗಳನ್ನು ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಕೇವಲ ಬಟ್ಟೆ ಒಗೆಯುವ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನ ತಲೆಯ ಮೇಲೆ ಕಲ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್ ಭಾಗದ ಸಿದ್ದನಪಾಳ್ಯದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಬಿಹಾರ ಮೂಲದ ಗಯಾ ಜಿಲ್ಲೆ ನಿತೀಶ್ ಕುಮಾರ್ (23) ಎಂದು ತಿಳಿದುಬಂದಿದೆ. ಸಿದ್ದನಪಾಳ್ಯದ ಮದರ್ ಇಂಡಿಯಾ ಎನ್ನುವ ಜೆಸಿಬಿ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಎಂದು ಹೇಳಲಾಗುತ್ತಿದ್ದು, ಇನ್ನೊಬ್ಬ ಸ್ನೇಹಿತ ಸೋಮನಾಥ ರಾತ್ರಿ ಎಲ್ಲರೂ ಮಲಗಿದ್ದಂತಹ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದಂತಹ ಕಲ್ಲನ್ನು ಮಲಗಿದ್ದ ನಿತೀಶ್ ಕುಮಾರ್ ತಲೆ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದ.
ಭಾನುವಾರ ದಿವಸ ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ವ್ಯಕ್ತಿಗೆ ಬಟ್ಟೆ ಒಗೆಯುವ ವಿಚಾರಕ್ಕೆ ವಾಗ್ವಾದವಾಗಿದೆ. ರಾತ್ರಿ ಕಲ್ಲು ಎತ್ತಿಹಾಕಿ ಸೋಮನಾಥ್ ಪರಾರಿಯಾಗಿದ್ದಾನೆ. ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಯಾದ ವ್ಯಕ್ತಿ ಬಿಹಾರದವನಾಗಿದ್ದು, ಆರೋಪಿ ಸೋಮನಾಥ್ (24) ಜಾರ್ಖಂಡ್ ಮೂಲದವನು. ಆತನನ್ನು ಈಗಾಗಲೇ ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ.