ಬೆಂಗಳೂರು : ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ನಲ್ಲಿ ಶಾಸಕ ಮುನಿರತ್ನ ಜೈಲುಪಾಲಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ನಾಳೆ ಮುನಿರತ್ನ ವಿರುದ್ಧ ಧರಣಿ ಹಮ್ಮಿಕೊಳ್ಳಲಾಗಿದೆ.
ಹೌದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕ್ಷೇತ್ರ ಯಶವಂತಪುರದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಭಾಗಿಯಾಗಲಿದ್ದಾರೆ.ಕೆಂಗೇರಿ ಉಪನಗರದ ಹೊಯ್ಸಳ ವೃತ್ತದಿಂದ ಗಣೇಶ ಮೈದಾನದವರೆಗೆ ರ್‍ಯಾಲಿ ನಡೆಯಲಿದೆ. ಮೆರವಣಿಗೆಯಲ್ಲಿ ಎಸ್.ಟಿ ಸೋಮಶೇಖರ್ ಪಾಲ್ಗೊಳ್ಳುತ್ತಿದ್ದಾರೆ.ಕಾಂಗ್ರೆಸ್ ಮುಖಂಡರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
14 ದಿನ ನ್ಯಾಯಾಂಗ ಬಂಧನ
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಅಡಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದ್ದು, ಇಂದು ಬೆಂಗಳೂರಿನ 84ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧಿಶರು 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.