ಮಂಗಳೂರು : ಒಂದು ಕಡೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆದ ಪ್ರಕರಣ ಇಡೀ ರಾಜ್ಯದಲ್ಲಿ ಕೋಮು ಗಲಭೆಗೆ ಸಾಕ್ಷಿಯಾಗಿದ್ದರೆ, ಇದೀಗ ಮಂಗಳೂರಿನಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಹಿಂದೂಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಮಂಗಳೂರು ನಗರದ ಹೊರವಲಯದ ಸುರತ್ಕಲ್ ಕಾಟಿಪಳ್ಳ 3ನೇ ಬ್ಲಾಕ್ನಲ್ಲಿರುವ ಅನ್ಯ ಕೋಮಿನ ಪ್ರಾರ್ಥನಾ ಮಂದಿರದ ಸಮೀಪ ಕಲ್ಲು ತೂರಾಟ ನಡೆಸಿದ್ದ ಪ್ರಕರಣ ಸಂಬಂಧ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ವೇಳೆಗೆ ಹಬ್ಬದ ಪ್ರಯುಕ್ತ ಪ್ರಾರ್ಥನಾ ಮಂದಿರಕ್ಕೆ ದೀಪಾಲಂಕಾರ ಮಾಡಿ, ಒಳಗಡೆ ಕಾರ್ಯಕರ್ತರೆಲ್ಲ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ರಾತ್ರಿ 9-50 ಗಂಟೆ ಸುಮಾರಿಗೆ ಕಲ್ಲು ತೂರಾಟ ನಡೆಸಲಾಗಿದೆ.ಎರಡು ಬೈಕ್‌ಗಳಲ್ಲಿ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಬಂದು ಮಂದಿರದ ಹಿಂಭಾಗದ ರಸ್ತೆಯ ಕಡೆಯಿಂದ ಕಲ್ಲು ಬಿಸಾಡಿದ್ದಾರೆ.
ಈ ಕುರಿತಂತೆ ಕೆ.ಹೆಚ್. ಅಬ್ದುಲ್ ರಹಿಮಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಭರತ್ ಶೆಟ್ಟಿ (26), ಚೆನ್ನಪ್ಪ ಚಲವಾದಿ (19), ನಿತಿನ್ ಹಡಪ (22), ಸುಜಿತ್ ಶೆಟ್ಟಿ (23), ಗ್ರಾಮದ ಅಣ್ಣಪ್ಪ (24) ಹಾಗೂ ಪ್ರೀತಮ್ ಶೆಟ್ಟಿ (34) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1 ಸ್ವಿಫ್ಟ್ ಕಾರು, 2 ಬೈಕ್ ಹಾಗೂ 4 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.