ನಾಗಮಂಗಲ: ಅಂಗಡಿಗಳಿಗೆ ಬೆಂಕಿ ಹಾಕಿದವರನ್ನು ಎಳೆದುಕೊಂಡು ಬಂದು ಅವರ ಮನೆ ಹರಾಜು ಹಾಕಿ ನಷ್ಟ ತುಂಬಿಸಿಕೊಡಿ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ನಾಗಮಂಗಲದ ಶ್ರೀ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಯಾವನು ಬೆಂಕಿ ಹಾಕಿದ್ದಾನೋ ಅವನನ್ನು ಮೊದಲು ಎಳೆದುಕೊಂಡು ಬನ್ನಿ. ಅವನ ಮನೆಯನ್ನು ಹರಾಜಿಗೆ ಹಾಕಿ ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದರು. ಜನರ ತೆರಿಗೆ ದುಡ್ಡಿನಲ್ಲಿ ನಾವು ಪುಂಡತನಕ್ಕೆ ಪರಿಹಾರ ಕೊಡಬೇಕಾಗಿಲ್ಲ. ಪುಂಡತನ ಮಾಡಿದವರನ್ನು ಎಳೆದು ತನ್ನಿ ಎಂದು ಸಲಹೆ ನೀಡಿದರು.
ಈ ಗಲಭೆ ಪೂರ್ವನಿಯೋಜಿತ ಎಂಬಂತೆ ಕಾಣುತ್ತಿದೆ. ಕೆಲವರ ಅಂಗಡಿಗಳನ್ನು ಗುರಿ ಮಾಡಿ ಬೆಂಕಿ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಅಂಗಡಿ, ವಾಹನಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಕಳೆದ ವರ್ಷವೂ ಕೂಡ ಇಲ್ಲಿಯೇ ಇಂಥ ಸಣ್ಣ ಅಹಿತಕರ ಘಟನೆ ಸಂಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಸರಕಾರ ಈ ಸಾರಿ ಇದರ ಕಡೆ ಹೆಚ್ಚಿನ ಗಮನ ಕೊಡಬೇಕಿತ್ತು. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸರಿಯಾದ ರಕ್ಷಣೆ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸರಕಾರ ಯಾಕೆ ಆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದ ಅವರು, ಪೊಲೀಸರು ಸಾಕಷ್ಟಿದ್ದು, ಅವರನ್ನು ಬೆಳ್ಳೂರು ಕ್ರಾಸ್‍ಗೆ ಕಳುಹಿಸಿದ ಬಗ್ಗೆ ಇಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೆ ಕಾರಣ ಯಾರು? ಯಾಕೆ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಭಾರತದಲ್ಲಿ ಎಲ್ಲ ಧರ್ಮಗಳಿವೆ. ಯಾವ ಧರ್ಮವನ್ನೂ ಇನ್ನೊಂದು ಧರ್ಮ ವಿರೋಧಿಸಬೇಕೆಂದಿಲ್ಲ. ಇವತ್ತು ಹಿಂದೂಗಳು ಮಾಡುವ ಕಾರ್ಯ ಚಟುವಟಿಕೆಗಳಿಗೆ ಮತ್ತೊಬ್ಬರು ವಿರೋಧ ವ್ಯಕ್ತಪಡಿಸಿದರೆ ಅವರನ್ನೂ ವಿರೋಧಿಸುವ ಪರಿಸ್ಥಿತಿ ಮುಂದೆ ಉದ್ಭವವಾಗುತ್ತದೆ ಎಂದು ತಿಳಿಸಿದರು. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಯಾರು ಕೊಟ್ಟರು, ಈ ರೀತಿಯ ಟಾರ್ಗೆಟ್‍ಗೆ ಕಾರಣ ಯಾರು ಎಂದು ಕೇಳಿದರು. ಇದರ ಪರಿಶೀಲನೆ ಆಗಬೇಕು ಎಂದರು.
ಯಾರು ಗಣೇಶನ ವಿಗ್ರಹ ತಂದಿಟ್ಟರೋ ಅವರು ಎ 1 ಆಗುತ್ತಾರೆ. ಯಾಕೆ? ಯಾಕೆ ಅವರು ಬೆಂಕಿ ಇಟ್ಟರೇ? ಯಾರು ಗಣೇಶನ ಮೆರವಣಿಗೆ ತಗೊಂಡು ಹೋಗುತ್ತಾರೋ ಅವರೆಲ್ಲ ಎ 1, ಎ 2, ಎ 3, ಎ 4 ಆಗಿದ್ದಾರೆ. ಯಾರ್ಯಾರು ಬೆಂಕಿ ಹಾಕಿದ್ದಾರೋ ಅವರೆಲ್ಲ ಕೊನೇ ನಂಬರ್ ಆರೋಪಿ ಆಗುತ್ತಾರಾ ಎಂದು ಕೇಳಿದರು. ಸರಕಾರದ ಉದ್ದೇಶ ಏನಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಯಾರಿಗಾಗಿ ನೀವು ಸರಕಾರ ನಡೆಸುತ್ತಿದ್ದೀರಿ? ಸರ್ವರಿಗಾಗಿ ಸರಕಾರವೇ? ಒಂದು ಕೋಮಿಗಾಗಿ ಸರಕಾರವೇ? ಮಾನ್ಯ ಮುಖ್ಯಮಂತ್ರಿಗಳು ಜನರಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಗಣೇಶ ಮೂರ್ತಿ ಇಡುವುದು ತಪ್ಪೇ? ಅದು ಕಾನೂನುಬಾಹಿರವೇ? ಅಥವಾ ಪೊಲೀಸರಿಗೆ ತಿಳಿಯದೆ, ಯಾರಿಗೂ ಗಮನಕ್ಕೆ ತರದೆ ಮಾಡಿದ್ದಾರಾ? ಎಂದು ಪ್ರಶ್ನೆಗಳ ಸರಣಿಯನ್ನೇ ಅವರು ಮುಂದಿಟ್ಟರು.
ತಪ್ಪು ಯಾರ ಕಡೆಯಿಂದ ಆಗಿದೆ? ಶಿಕ್ಷೆ ಯಾರಿಗೆ? ಗಣೇಶ ಮೆರವಣಿಗೆ ಮಾಡುವವರು ಖುಷಿಯಿಂದ ಮಾಡುತ್ತಿದ್ದಾರೆ. ಬಟ್ಟೆ ಅಂಗಡಿಯವನು ನಿಮಗೆ ಕೊಟ್ಟ ತೊಂದರೆ ಏನು? ಈಗ ಅವರ ಜೀವನೋಪಾಯ ಏನಾಗಬೇಕು? ಸರಕಾರ ಇದನ್ನೆಲ್ಲ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಇದೇವೇಳೆ ಅವರು ಗಣೇಶೋತ್ಸವದ ಆಯೋಜಕರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು. ಅಮಾಯಕ ಹಿಂದೂಗಳ ಮೇಲೆ ಹೇರಲಾದ ಎಫ್.ಐ.ಆರ್. ಅನ್ನು ರದ್ದು ಮಾಡಬೇಕು; ಗಲಾಟೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ವೈ.ಸಂಪಂಗಿ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹಾಗೂ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಶಿವಮೊಗ್ಗ: ಸೆ.18ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಕೆಲವು ದೇಶಗಳಲ್ಲಿ ಬಳಸಲು ‘ಎಂಪಾಕ್ಸ್’ ವಿರುದ್ಧ ವಿಶ್ವದ ಮೊದಲ ಲಸಿಕೆಗೆ ‘WHO’ ಅನುಮೋದನೆ | Mpox MVA-BN vaccine