ಬೆಂಗಳೂರು: ಪರಸ್ಪರ ಮುಟ್ಟಿಕೊಳ್ಳುವುದೆ ಸಮಸ್ಯೆಯಾಗಿರುವ ಇಂದಿನ ನಾಗರಿಕ ಸಮಾಜದಲ್ಲಿ ಕೈಗೆ ಕೈಕೊಟ್ಟು ನಿಲ್ಲುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಕರ್ನಾಟಕವು ಆಚರಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಬಹುದೊಡ್ಡ ಘಟನೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ದಿನಾಂಕ: 15-09-2024ರ ಭಾನುವಾರ ರಾಜ್ಯಾದ್ಯಂತ ನಡೆಯಲಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಯೋಜಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಮತ್ತು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ವಿಧಾನಸೌಧದಲ್ಲಿ ಮಾತನಾಡಿದ ಡಾ.ಬಿಳಿಮಲೆ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಮಹಾಶಾಪವೆಂದು ಬಣ್ಣಿಸಿದ್ದನ್ನು ನೆನಪಿಸಿಕೊಂಡರೆ ಇಂದು ರಾಜ್ಯಾದ್ಯಂತ ಸುಮಾರು ಎರಡೂವರೆ ಸಾವಿರ ಕಿ.ಮೀ. ಉದ್ದ ಮಾನವ ಸರಪಳಿಯ ನಿರ್ಮಾಣದ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಸರ್ಕಾರವು ನಿರ್ಧರಿಸಿರುವುದು ಅತ್ಯಂತ ಗಮನಾರ್ಹವಾದ ಸಂಗತಿ. ಇದು ಯಶಸ್ವಿಯಾಗುವುದು ಪ್ರಜಾಪ್ರಭುತ್ವದ ಹಿತದೃಷ್ಠಿಯಿಂದ ನಿರ್ಣಾಯಕವೆಂದರು.
ಸರ್ಕಾರವು ಇಂತಹ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಇದು ಜನಪರವಾದ ಆಂದೋಲನವಾಗಿ ರೂಪುಗೊಳ್ಳಬೇಕಾದಲ್ಲಿ ಆಡಳಿತ ಯಂತ್ರದ ಜವಾಬ್ದಾರಿ ಬಹಳ ದೊಡ್ಡದಾಗಿರುತ್ತದೆ. ಆಡಳಿತ ಯಂತ್ರವು ಸರ್ಕಾರದ ಆಶಯವನ್ನು ಅರ್ಥೈಸಿಕೊಂಡು ಇದರ ಪ್ರಾಮುಖ್ಯತೆಯ ಅರಿವನ್ನು ಜನ ಸಾಮಾನ್ಯರಲ್ಲಿ ಮೂಡಿಸುವ ಮೂಲಕ ಈ ಜನಾಂದೋಲನವನ್ನು ಯಶಸ್ವಿಯಾಗಿಸಬೇಕೆಂದು ಕರೆ ನೀಡಿದರು.
ಸಮಗ್ರ ವಿಕಾಸಕ್ಕೆ ಪ್ರಜಾಪ್ರಭುತ್ವದ ಕೊಡುಗೆ ಬಹಳ ದೊಡ್ಡದು
ಪ್ರಜಾಪ್ರಭುತ್ವ ಮನುಕುಲ ಕಂಡುಕೊಂಡ ಅತ್ಯಂತ ಮಹತ್ವದ ಆಡಳಿತ ವ್ಯವಸ್ಥೆಯಾಗಿದ್ದು, ಈ ವ್ಯವಸ್ಥೆ ಮನುಷ್ಯನ ವೈಯಕ್ತಿಕ ವಿಕಾಸದ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ವಿಕಾಸಕ್ಕೆ ಬಹುಮುಖ್ಯ ಕೊಡುಗೆಯನ್ನು ಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಜಗತ್ತಿನ ಅತ್ಯುತ್ಕೃಷ್ಟ ಗ್ರಂಥಗಳಲ್ಲಿ ಒಂದಾಗಿದ್ದು, ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವ ಈ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಮೇರಿಕಾದಂತಹ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲು ಅಲ್ಲಿನ ಸಮಾಜ ಇಡಿಯಾಗಿ ಹೋರಾಡಿದ ಸಂದರ್ಭ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಸ್ವಾತಂತ್ರ್ಯ ಬಂದ ಕೂಡಲೇ ನಮ್ಮ ದೇಶದ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾದುದು ಸಾಮಾನ್ಯ ಘಟನೆಯಲ್ಲ. ಅದು ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಮಾತ್ರ ಸಾಧ್ಯವಾಯಿತು ಎಂದರು.
ರಾಜಪ್ರಭುತ್ವದ ಸಾಧನೆಗಳು ಏನೇ ಇದ್ದರೂ ಅಲ್ಲಿ ಸಮಾಜದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಿರಲಿಲ್ಲ. ಅಲ್ಲಿ ಉತ್ಪಾದನೆಯ ಸಮಾನ ವಿತರಣೆಯಾಗದೆ ಒಂದೆಡೆ ಕೇಂದ್ರಿಕೃತವಾಗಿತ್ತು. ವಸಾಹತು ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಸಂಪನ್ಮೂಲಗಳು ಅನ್ಯರಿಂದ ದೋಚಲ್ಪಟ್ಟವು. ಸುಭದ್ರ ಸಂವಿಧಾನದ ಮೂಲಕ ನಮ್ಮ ನಾಗರಿಕ ಸಮಾಜವನ್ನು ಕಟ್ಟಿದ ನಂತರವೂ ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಹೋದಲ್ಲಿ ನಮ್ಮದು ದುರ್ಬಲ ಸಮಾಜವಾಗಿ ರೂಪುಗೊಳ್ಳುತ್ತದೆ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಗಟ್ಟಿ ಅರಿವಿನ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಭಾನುವಾರದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ವಿನೂತನ ಆಚರಣೆ ಅತ್ಯಂತ ಸಾಂಕೇತಿಕವೂ, ಚಾರಿತ್ರಿಕವೂ ಆಗಿದೆ ಎಂದರು.
ನಾಡಿನ ಎಲ್ಲ ನಾಗರಿಕರು ಭಾನುವಾರ ಇಂತಹ ಮಹತ್ವದ ಘಟನೆಯಲ್ಲಿ ಪಾಲ್ಗೊಂಡು ಪರಸ್ಪರ ಕೈ ಕೈ ಭದ್ರಪಡಿಸಿಕೊಳ್ಳುವ ಮೂಲಕ ನಾಗರೀಕ ಸಮಾಜವಾಗಿ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದ ಡಾ.ಬಿಳಿಮಲೆ ಪ್ರತಿಯೊಬ್ಬರು ಈ ದಿನದ ಆಚರಣೆಯನ್ನು ಸಂಭ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಮೇ.ಮಣಿವಣ್ಣನ್ , ಆಯುಕ್ತರಾದ ರಾಕೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ, ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಮತ್ತು ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.