ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಹೊದಿಕೆ ಪ್ರಮಾಣ ಶೇ.22 ರಷ್ಟು ಮಾತ್ರ ಇದ್ದು, ಅದನ್ನು ಶೇ. 33 ಕ್ಕೆ ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮ ಅರಣ್ಯ ಸಿಬ್ಬಂದಿಗಳ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅರಣ್ಯ ಸಂರಕ್ಷಣೆ ಎಲ್ಲರ ಕರ್ತವ್ಯ, ನಿಗದಿಯಂತೆ ರಾಜ್ಯದ ಭೂಪ್ರದೇಶದ ಶೇ. 33 ರಷ್ಟು ಅರಣ್ಯ ಹೊದಿಕೆಯಿರಬೇಕು. ಆದರೆ ಕಳೆದ ಹಲವು ವರ್ಷಗಳಿಂದ ಕೇವಲ 22 ರಷ್ಟು ಅರಣ್ಯ ಹೊದಿಕೆಯಿಂದೆ. ಇನ್ನೂ ಶೇ. 11 ರಷ್ಟು ಅರಣ್ಯ ಹೊದಿಕೆಯನ್ನು ನಿರ್ಮಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ. ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ. ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು. ಕಾಡು ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ಎಂದರೆ ನಾವು ನಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ ಎಂದರು.
ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ತಿಯಾಗಲಿ ಎಂದು ಹೇಳಿದ್ದಾರೆ.