ಯಾದಗಿರಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶಾಸಕ ಗಣಿಗ ರವಿ ಕುಮಾರ್ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂಪಾಯಿ ಆಮಿಷ ಒಡ್ಡಿ ಖರೀದಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ, ಕಳೆದ ಒಂದು ವರ್ಷದಿಂದ ಶಾಸಕರನ್ನು ಖರೀದಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಸ್ಪೋಟ ವಾದಂತಹ ಹೇಳಿಕೆ ನೀಡಿದರು.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಒಳಗೆ ಸರ್ಕಾರ ಪತನ ಎಂದು ಸಿಟಿ ರವಿ ಹೇಳಿಕೆ ವಿಚಾರವಾಗಿ ದೀಪಾವಳಿ ಇನ್ನು ಎರಡು ತಿಂಗಳಿದೆ ನೋಡೋಣ. ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಎಷ್ಟು ಬಾರಿ ಬಿದ್ದಿದೆ ಹೇಳಿ. ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಆದರೆ ಯಾರೂ ಸಹ ಬಿಜೆಪಿಯವರ ಬಲೆಗೆ ಬೀಳುವುದಿಲ್ಲ ಎಂದರು.
ಶಾಸಕರ ಖರೀದಿ ಮಾಡಲು ಒಂದು ವರ್ಷದಿಂದ ಪ್ರಯತ್ನ ನಡೆದಿದೆ. ಹಬ್ಬಗಳು ಬರುತ್ತೆ ಹೋಗುತ್ತೆ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಚುನಾಯಿತ ಸರ್ಕಾರವನ್ನು ಆಭದ್ರ ಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ 5 ವರ್ಷ ಅಲ್ಲ 10 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ದೇಶದಲ್ಲಿ ಸಿದ್ದರಾಮಯ್ಯರಷ್ಟು ಜನಪ್ರಿಯ ರಾಜಕಾರಣಿ ಯಾರು ಇಲ್ಲ. ಸಿದ್ದರಾಮಯ್ಯ ಜನಪ್ರಿಯ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಯಾದಗಿರಿಯಲ್ಲಿ ಬಿಜೆಪಿಯ ವಿರುದ್ಧ ಶರಣಬಸಪ್ಪ ದರ್ಶನಪುರ್ ವಾಗ್ದಾಳಿ ನಡೆಸಿದರು.