ಹುಬ್ಬಳ್ಳಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಇದೀಗ ಜೈಲು ಸೇರಿದ್ದಾರೆ. ಅಲ್ಲದೆ ಇತ್ತೀಚಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಆಗಿದ್ದವು. ಅಲ್ಲದೆ ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ಸಾವಿಗೂ ಮುನ್ನ ಸಿಕ್ಕಂತಹ ಫೋಟೋ ವೈರಲ್ ಆಗಿದ್ದವು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಇದೀಗ ಸಚಿವ ಸಂತೋಷ್ ಲಾಡ್ ಇದರ ಹಿಂದೆ ಪ್ರಹ್ಲಾದ್ ಜೋಶಿ ಅವರದ್ದೇ ಕೈವಾಡ ಇರಬಹುದು ಎಂದು ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಫೋಟೋಗಳು ವೈರಲ್ ಆಗಿರುವ ವಿಚಾರದಲ್ಲಿ ಆರೋಪ ಮಾಡುತ್ತಿರುವ ಪ್ರಹ್ಲಾದ್ ಜೋಶಿ ಅವರದ್ದೇ ಕೈವಾಡ ಇರಬಹುದು. ಇಷ್ಟು ನಿಖರವಾಗಿ ಫೋಟೋ ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಅಂದ್ರೆ ಅವರಿಗೆ ಮಾಹಿತಿ ಇರಬೇಕು ಎಂದು ಕುಟುಕಿದರು.
ಇನ್ನೂ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುವುದು ಅಪ್ರಸ್ತುತ. ಯಾರಾದ್ರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರೆ, ಅದು ಅವರ ವೈಯಕ್ತಿಕ. ನಮ್ಮ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ.ಸಿಎಂ ಬದಲಾವಣೆ ಕುರಿತಂತೆ ವೇಣುಗೋಪಾಲ ಹಾಗೂ ಸುರ್ಜೇವಾಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಹೈಕಮಾಂಡ್ನಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ.
ಸರ್ಕಾರ ಉರುಳುವ ವಿಚಾರವಾಗಿ ಒಂದು ವೇಳೆ ಕೇಂದ್ರ ಸರ್ಕಾರ ಉರುಳಬಹುದು. ಆದರೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಕ್ಕೆ ಧಕ್ಕೆ ಆಗುವುದಿಲ್ಲ. ಏಕೆಂದರೆ ಅವರ ಹತ್ತಿರ ಫುಲ್ ಮೆಜಾರಿಟಿ ಇಲ್ಲ. ನಾಳೆ ಜಮ್ಮು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಸೋಲುವ ಸಾಧ್ಯತೆ ಇದೆ. ಬಿಹಾರ ಕೂಡ ಸೋಲಬಹುದು. ಮುಂದೆ ನಾಲ್ಕು ರಾಜ್ಯಗಳ ಚುನಾವಣೆಯಾದ್ರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುತ್ತಾ ಎಂಬ ಪ್ರಶ್ನೆಯನ್ನು ಅವರನ್ನು ಕೇಳಬೇಕು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬೀಳುವುದಿಲ್ಲ ಎಂದರು.