ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 18 ಅಧಿಕಾರಿಗಳಿಗೆ 3 ದಿನದೊಳಗೆ ತನಿಖೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರು ಅಕ್ರಮ ಭೂ ವ್ಯವಹಾರಗಳ ಕುರಿತು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಮೈಸೂರು ವಿಜಯನಗರ ಹಿನಕಲ್ 2ನೇ ಹಂತದ ಮೈಸೂರು ಸರ್ವೆ ನಂ.89ರಲ್ಲಿದೆ. ಇಲ್ಲಿನ ಬಡಾವಣೆ ಅಭಿವೃದ್ಧಿಪಡಿಸಲು ಮುಡಾ 7 ಎಕರೆ 18 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, 1996-97ರಲ್ಲಿ ಹಿನಕಲ್ ಪಂಚಾಯಿತಿಯ ಅಂದಿನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರು ಬಡವರಿಗೆ ನಿವೇಶನಗಳನ್ನು ಸೃಷ್ಟಿಸಿ ಹಂಚಿಕೆ ಮಾಡುವ ನೆಪದಲ್ಲಿ ಈ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಡಾದಿಂದ ಸೂಕ್ತ ಅನುಮತಿ ಇಲ್ಲದೇ ಸುಳ್ಳು ದಾಖಲೆಗಳನ್ನು ತಯಾರಿಸಿ 25×25 ಅಡಿ ಅಳತೆಯ 350ಕ್ಕೂ ಹೆಚ್ಚು ನಿವೇಶನಗಳನ್ನು ಬಿಇಎಂಎಲ್ ನೌಕರರು, ಶಾಲಾ ಶಿಕ್ಷಕರು, ಪಂಚಾಯಿತಿ ಪಿಡಿಒಗಳು, ಅಂಚೆ ಕಚೇರಿ ನೌಕರರು, ಸರ್ಕಾರಿ ನೌಕರರು, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.
ಗಂಗರಾಜು ಅವರು 2017ರಲ್ಲಿ ಮುಡಾ ಮತ್ತು ಎಸಿಬಿಯಲ್ಲಿ ಅತಿಕ್ರಮಣ ಆಸ್ತಿಯನ್ನು ವಾಪಸ್ ಪಡೆಯುವಂತೆ ದೂರು ಸಲ್ಲಿಸಿದ್ದರು. 2022 ರಲ್ಲಿ, ಎಸಿಬಿ ಎಫ್‌ಐಆರ್ ಅನ್ನು ದಾಖಲಿಸಿತು, ನಂತರ ಅದನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು. ಇದೀಗ ಲೋಕಾಯುಕ್ತರು 2017ರಲ್ಲಿ ಹುದ್ದೆಯಲ್ಲಿದ್ದ ಸೂಪರಿಂಟೆಂಡೆಂಟ್ ಇಂಜಿನಿಯರ್, ಕಾರ್ಯದರ್ಶಿ ಸೇರಿದಂತೆ 18 ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.