ಕೊಪ್ಪಳ : ರಾಜ್ಯದಲ್ಲಿ ಒಂದೆಡೆ ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ. ಇನ್ನು ಕೆಲ ನಾಯಕರಿಗೆ ಸಿಎಂ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ಅಲ್ಲದೆ ಇತ್ತೀಚಿಗೆ ಹಲವು ಕಾಂಗ್ರೆಸ್ಸಿನ ಹಿರಿಯ ನಾಯಕರು ನಾನು ಸಿಎಂ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ್ ರಾಯರೆಡ್ಡಿ ಕೂಡ ನಾನು ಸಿಎಂ ಆದರೆ ತಪ್ಪೇನು ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನದ ಆಕಾಂಕ್ಷಿ. ನಾನ್ಯಾಕೆ ಸಿಎಂ ಆಗಬಾರದು? ನಾನು ಲಿಂಗಾಯತ ಸಮುದಾಯಕ್ಕೆ ಸೇರಿದ್ದೇನೆ. ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಬಾರಿ ಆಯ್ಕೆ ಆಗಿದ್ದೇನೆ. ಲಿಂಗಾಯತ ಸಮುದಾಯಕ್ಕೆ ಕೊಡುವುದಾದರೆ ನನಗೆ ಕೊಡಲಿ.ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ತಿಳಿಸಿದರು.
ಸಿಎಂ ಯಾರಾಗಬೇಕೆಂಬುದು ವರಿಷ್ಠರು ಮತ್ತು ಶಾಸಕರು ನಿರ್ಧರಿಸುತ್ತಾರೆ. ಜೊತೆಗೆ ಸಿದ್ದರಾಮಯ್ಯನವರ ಆಶೀರ್ವಾದ ಸಹ ಬೇಕು ಸಿದ್ದರಾಮಯ್ಯನವರು ಸೂಚಿಸಿದ ವ್ಯಕ್ತಿ ಮುಂದೆ ಸಿಎಂ ಆಗುತ್ತಾರೆ ಯಾರಿಗೆ ಯಾವಾಗ ಲಾಟರಿ ಹೊಡೆಯುತ್ತದೆ ಎಂದು ಗೊತ್ತಿಲ್ಲ ಆದರೆ ಸದ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಿಎಂ ಆಗಬೇಕು ಅಂತ ಕೆಲವರು ಆಸೆ ಪಡುತ್ತಿದ್ದಾರೆ. ಸಿಎಂ ಹುದ್ದೆಯ ಆಸೆಪಡೋದು ತಪ್ಪಲ್ಲ. ಆದರೆ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯನವರು ಪೂರ್ಣಾವಧಿಗೆ ಸಿಎಂ ಆಗಿರಬೇಕು. ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ ಎಂದು ಯಾರೂ ಹೇಳುತ್ತಾರೆ? ನ್ಯಾಯಾಲಯ ತನಿಖೆಗೆ ಆದೇಶಿಸಿದ್ದರು ರಾಜೀನಾಮೆ ನೀಡಬಾರದು, ಯಾರು ಬೇಕಾದರೂ ರಾಜ್ಯದ ಮುಖ್ಯಮಂತ್ರಿ ಆಗಬಹುದು ಎಂದು ಕೊಪ್ಪಳದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.