ಮಂಡ್ಯ : ಶಿಕ್ಷಕರು ಉತ್ತಮ ಸಮಾಜದ ನಿರ್ಮಾತೃಗಳು, ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವ ಮೂಲಕ ಸತ್ಪ್ರಜೆಗಳನ್ನು ರೂಪಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು.
ಮದ್ದೂರು ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮದ್ದೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಗುರುವಿನ ಸ್ಥಾನಕೆ ತನ್ನದೆಯಾದ ವಿಶೇಷ ಸ್ಥಾನ ಮತ್ತು ಮಹತ್ವವಿದೆ. ಶ್ರೇಷ್ಠ ಶಿಕ್ಷಕರಿಂದ ಶಿಕ್ಷಕ ವೃಂದಕ್ಕೆ ಗೌರವ ಸಿಗುತ್ತದೆ. ಪ್ರತಿಯೊಬ್ಬ ಶಿಕ್ಷಕರು ಶ್ರೇಷ್ಠ ಶಿಕ್ಷಕರಾಗುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಆದರ್ಶವಾಗಬೇಕೆಂದು ಕಿವಿಮಾತು ಹೇಳಿದರು.
ಶಿಕ್ಷಕರು ಆಜೀವ ಕಲಿಕೆಗೆ ಪ್ರೋತ್ಸಾಹ, ಬೆಂಬಲ ಮತ್ತು ಸಮರ್ಪಣೆಯನ್ನು ನೀಡುತ್ತಾರೆ, ವಿಮರ್ಶಾತ್ಮಕ ಚಿಂತನೆಯನ್ನು ಪ್ರೇರೇಪಿಸುತ್ತಾರೆ ಮತ್ತು ಕಲಿಕೆಯ ಪ್ರೀತಿಯನ್ನು ನೀಡುತ್ತಾರೆ. ಇದಲ್ಲದೆ, ಶೈಕ್ಷಣಿಕ ಬೆಳವಣಿಗೆ ಮೂಲಕ ನೈತಿಕ ವ್ಯಕ್ತಿಗಳ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಾರೆ ಎಂದರು.
ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕ ಕೆ.ಎಂ.ರವಿ ಮಾತನಾಡಿ, ಆದರ್ಶ ಶಿಕ್ಷಕರು ಸ್ಫೂರ್ತಿಯ ದಾರಿದೀಪವಾಗಿದ್ದಾರೆ, ಅವರು ವಿದ್ಯಾರ್ಥಿಗಳ ಜೀವನದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತಾರೆ. ಆದರ್ಶ ಶಿಕ್ಷಕರು ಕೇವಲ ಶಿಕ್ಷಕರಲ್ಲ ಅವರು ನಾಳಿನ ನಾಯಕರನ್ನು ರೂಪಿಸುವ ಮಾರ್ಗದರ್ಶಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮಂಗಳಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ರವಿಚಂದ್ರ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ರವೀಶ್ ಹಾಗೂ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳಾದ ನಾಗೇಶ್, ಎಚ್.ಆರ್.ಅನಂತೇಗೌಡ, ಮಂಜುನಾಥ್, ಕೆ.ಸಿ.ಮಹೇಂದ್ರ, ಬೈರೇಗೌಡ, ಶಿಕ್ಷಣ ಸಂಯೋಜಕರಾದ ಕೆ.ಆರ್.ಲೋಕೇಶ್, ರಮೇಶ್, ಸುಬ್ರಮಣ್ಯ, ನಟೇಶ್, ಮಹೇಶ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ, ಟೀಕಾಕಾರರಿಗೆ ಕ್ಯಾಮೆರಾಗಳೇ ಉತ್ತರಿಸುತ್ತವೆ: ಡಿಕೆಶಿ