ಹಾವೇರಿ : ಸಂಸದ ಬಸವರಾಜ್ ಬೊಮ್ಮಾಯಿ ಕ್ಷೇತ್ರದಲ್ಲಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತವಿದ್ದರೂ ಸಹ ಬಿಜೆಪಿ ಎದುರು ಸೋಲನುಭವಿಸಿದ್ದು, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಹೌದು ಇಂದು ನಡೆದ ಹಾವೇರಿ ನಗರಸಭೆ ಚುನಾವಣೆ ಬಿಜೆಪಿ ತೆಕ್ಕೆಗೆ ಬಿದಿದ್ದು, ಕಾಂಗ್ರೆಸ್ಗೆ ಮುಖಭಂಗವಾಗಿದೆ. ಆ ಮೂಲಕ ಬಹುಮತ ಇದ್ದರು ಗದ್ದಿಗೆ ಕಾಂಗ್ರೆಸ್ ಪಡೆ ಚೆಲ್ಲಿದೆ. ಮತದಾನ ಪ್ರಕ್ರಿಯಲ್ಲಿ ಕಾಂಗ್ರೆಸ್ನ 6 ಸದಸ್ಯರು ಗೈರಾಗಿದ್ದರು. ಒಟ್ಟು 34 ಸದಸ್ಯರ ಸಂಖ್ಯೆಯನ್ನು ಹಾವೇರಿ ನಗರಸಭೆ ಹೊಂದಿದೆ.
ಕಾಂಗ್ರೆಸ್ ಅಭ್ಯರ್ಥಿ ರೇಣುಕಾ 11 ಮತ ಪಡೆದು ಪರಾಜಿತಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಲಾ ರಾಮು ಮಾಳಗಿ 17 ಮತ ಪಡೆದು ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ನಗರಸಭೆ ಮುಂದೆ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ ಮಾಡಲಾಗಿದೆ.
ಕುಂತ ದೋಣಿಯಲ್ಲಿ ತೂತು ಕೊರೆಯುವ ಕೆಲಸ ನಡೆಯುತ್ತಿದೆ
ಈ ಕುರಿತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ರಾಜ್ಯ ರಾಜಕಾರಣದಲ್ಲಿ ಎಲ್ಲ ಹಂತದಲ್ಲೂ ಬದಲಾವಣೆ ಆಗಲಿದೆ. ರಾಜ್ಯ ಚುಕ್ಕಾಣಿ ಬದಲಾವಣೆಯಾದರೂ ಆಶ್ಚರ್ಯ ಪಡಬೇಕಿಲ್ಲ. ರಾಜ್ಯ ರಾಜಕಾರಣದಲ್ಲಿ ಪರಿವರ್ತನೆ ಕಾಲ, ಎಲ್ಲ ಬದಲಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಚುಕ್ಕಾಣಿ ಬದಲಾವಣೆ ಆಗಲಿದೆ. ಆಪರೇಷನ್ ಕಮಲ ಮಾಡುವ ಅವಶ್ಯಕತೆ ನಮಗೆ ಇಲ್ಲ. ಆದರೆ ದೊಡ್ಡಪ್ರಮಾಣದ ರಾಜಕೀಯ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.
ನಮ್ಮವರೇ ನಮಗೆ ಶತ್ರುಗಳ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ನಾವು ಹಿಂದೆಯೇ ಹೇಳಿದ್ವಿ, ಸಿಎಂಗೆ ತಡವಾಗಿ ಅನುಭವಕ್ಕೆ ಬಂದಿದೆ. ಎಲ್ಲವೂ ಸರಿ ಇದೆ ಅಂತಾ ದೋಣಿಯಲ್ಲಿ ಕುಳಿತಿದ್ದರು. ಈಗ ಕುಂತ ದೋಣಿಯಲ್ಲಿ ತೂತು ಕೊರೆಯುವ ಕೆಲಸ ನಡೆಯುತ್ತಿದೆ ಎಂದುವಾಗ್ದಾಳಿ ಮಾಡಿದ್ದಾರೆ. ನೋಡೋಣ ರಾಜಕೀಯ ಅನುಭವ ಬಳಸಿಕೊಂಡು ಯಾವ ರೀತಿ ಹೋರಾಟ ಮಾಡುತ್ತಾರೆ ಎಂದು. ಕಾನೂನು ಹೋರಾಟ ಬಹಳ ಪ್ರಾಮುಖ್ಯತೆ ಹೊಂದಿದ್ದು, ಅದರ ಜೊತೆಗೆ ರಾಜಕೀಯ ಹೋರಾಟ ಇದೆ. ಸಿದ್ದರಾಮಯ್ಯ ಮುಂದೆ ಏನು ಮಾಡುತ್ತಾರೆ ಕಾದು ನೋಡೊಣ ಎಂದಿದ್ದಾರೆ.