ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದ್ದು ಅಲ್ಲದೆ ಶೋಭಾ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ನಲ್ಲಿ ಶೋಭಾ ಕರಂದ್ಲಾಜೆ ಕ್ಷಮೆ ಯಾಚಿಸಿದ್ದಾರೆ.
ಹೌದು ಈ ಹೇಳಿಕೆ ಸಂಬಂಧ ಶೋಭಾ ಕರಂದ್ಲಾಜೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ಕಿಡಿಕಾರಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದ ಶೋಭಾ ಕರಂದ್ಲಾಜೆ, ಹೈಕೋರ್ಟ್ ನಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ತಮಿಳುನಾಡಿನ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಗೌರವ ಇದೆ. ತಮಿಳುನಾಡಿನ ಜನರ ಬಗ್ಗೆ ಅಪಾರ ಗೌರವ ಇದೆ. ತಮಿಳುನಾಡಿನ ಜನರ ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶ ಇರಲಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದಕ್ಕೆ ತಮಿಳುನಾಡು ಜನರಿಗೆ ಕ್ಷಮೆ ಯಾಚಿಸುವೆ ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದರು.
ಪ್ರಕರಣ ಹಿನ್ನೆಲೆ?
ಮಾರ್ಚ್ 1ರಂದು ಬೆಂಗಳೂರಿನ ಜನಪ್ರಿಯ ಉಪಾಹಾರ ಗೃಹವಾದ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಆಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಾಂಬ್ ಸ್ಫೋಟದೊಂದಿಗೆ ತಮಿಳುನಾಡನ್ನು ತಳುಕು ಹಾಕಿದ್ದರು. ಈ ಸಂಬಂಧ ಮದುರೈ ಪೊಲೀಸರು ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ, ಶೋಭಾ ಕರಂದ್ಲಾಜೆ ಅವರು, ತಮ್ಮ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕೈಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ, ನಾನು ತಮಿಳುನಾಡು ಜನರ ಕುರಿತು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ. ನಾನು ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈಗಾಗಲೇ ಕ್ಷಮಾಪಣೆ ಕೋರಿದ್ದೇನೆ ಎಂದೂ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಇನ್ನು ಕೋರ್ಟ್ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.