ತುಮಕೂರು : 2023 ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಶಾಸಕ ರಂಗನಾಥ್ ಅವರು ಚುನಾವಣೆಯ ವೇಳೆ ಅಕ್ರಮ ಎಸಗಿದ್ದಾರೆ. ಅಡುಗೆ ಸಾಮಾನು, ಡಿನ್ನರ್ ಸೆಟ್, ಪ್ರೀಪೇಯ್ಡ್ ಕಾರ್ಡ್ಗಳನ್ನು ನೀಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ, ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕೃಷ್ಣಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಶಾಸಕ ರಂಗನಾಥ್ ಗೆ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ರಂಗನಾಥ್ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಕೃಷ್ಣಕುಮಾರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್ ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಕಾಂಗ್ರೆಸ್ ಶಾಸಕರಿಗೆ ನೋಟಿಸ್ ರವಾನಿಸಿದೆ.
ಅಲ್ಲದೆ ಪರಾಜಿತ ಅಭ್ಯರ್ಥಿ ಕೃಷ್ಣಕುಮಾರ್ ಮಾಡಿರುವ ಆರೋಪಗಳ ಬಗ್ಗೆ ಸೆಪ್ಟೆಂಬರ್ 23 ರೊಳಗೆ ಪ್ರತಿಕ್ರಿಯಿಸಿ. ಈ ಬಗ್ಗೆ ಯಾವುದಾದರೂ ತಕರಾರು ಮತ್ತು ದಾಖಲೆಗಳಿದ್ದರೆ ಕೋರ್ಟ್ಗೆ ಸಲ್ಲಿಸಿ ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ನಡೆಸಲಾಗುವುದು ಎಂದು ಪೀಠ ಹೇಳಿದೆ.