ದಕ್ಷಿಣಕನ್ನಡ : 2014ರಲ್ಲಿ ಗೋದ್ರಾ ಗಲಭೆ ಮಾಡಿದವರೇ ಭಾರತದ ಪ್ರಧಾನಿ ಆದರು. ಆಗ ನಾನು ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದೆ. ನಂತರ, 2019ರ ಚುನಾವಣೆಯಲ್ಲಿ ನಾನು ದಕ್ಷಿಣ ಕನ್ನಡ ಡಿಸಿಯಾಗಿದ್ದೆ. ಆಗ ಲೋಕಸಭಾ ಚುನಾವಣೆ ನಡೆದು ಮತ್ತೆ ಬಿಜೆಪಿಗೆ ಹೆಚ್ಚು ಮತಗಳು ಬಿದ್ದು, ಅವರೇ ಪ್ರಧಾನಿಯಾದರು ಎಂದು ತಮಿಳುನಾಡು ಸಂಸದ ಸಸಿಕಾಂತ್ ಸೇಂಥಿಲ್ ತಿಳಿಸಿದರು.
ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗುಟ್ಟನ್ನು ಇದೀಗ ಹಂಚಿಕೊಂಡಿದ್ದಾರೆ. ಹೆಂಡತಿಯ ಒಂದೇ ಒಂದು ಮಾತಿಗೆ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿದರು. ಅದರ ಜೊತೆಗೆ ಇಡೀ ಕಾಶ್ಮೀರದಲ್ಲಿ ಆರ್ಮಿ ಹಾಕಿ ಗೃಹಬಂಧನ ಮಾಡಿದ್ದರು. ಆಗ ನಾನು ಇವತ್ತು ಕಾಶ್ಮೀರಕ್ಕೆ ಆದ ಪರಿಸ್ಥಿತಿ ನಾಳೆ ಮಂಗಳೂರಿಗೂ ಆಗಬಹುದು ಅಂದುಕೊಂಡೆ. ಇದೇ ಹೊತ್ತಲ್ಲಿ ನನ್ನ ಪತ್ನಿ ಮಂಗಳೂರಿಗೆ ಬಂದಳು. ನಾವು ಮಂಗಳೂರಲ್ಲಿ ಟಿವಿ ನೋಡುತ್ತಿದ್ದಾಗ, ಕಾಶ್ಮೀರದ ಮಿಲಿಟರಿ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು.
ಆಗ ನನ್ನ ಪತ್ನಿ ನನಗೆ ಕಾಲೇಜು ದಿನದ ಸೆಂಥಿಲ್ ಹೇಗಿದ್ದ ಅಂದಳು. ನೀನು ಕಾಲೇಜ್‌ನಲ್ಲಿ ರೆಬಲ್ ಆಗಿದ್ದೆ. ಈಗ ಡಿಸಿಯಾಗಿ ಸರ್ಕಾರಿ ಬಂಗ್ಲೆಯಲ್ಲಿ ಜಾಲಿಯಾಗಿದ್ದೀಯಾ ಅಂದಳು. ಇದು ನನಗೆ ಇಡೀ ರಾತ್ರಿ ತುಂಬಾ ನೋವು ಕೊಟ್ಟಿತು. ಮರುದಿನ ಬೆಳಿಗ್ಗೆ ಎದ್ದು ಪತ್ನಿ ಬಳಿ ರಾಜೀನಾಮೆ ಕೊಡುತ್ತೇನೆ ಎಂದೆ. ಇದಾದ ಮೂರು ದಿನಗಳಲ್ಲಿ ನನ್ನ ಡಿಸಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ ಎಂದು ತಿಳಿಸಿದರು.
2002ರ ಗೋದ್ರಾ ಗಲಾಟೆಯಿಂದಲೇ ನಾನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದೆ. ಮಂಗಳೂರು ಮಾತ್ರವಲ್ಲದೇ ಇಡೀ ದೇಶದಲ್ಲಿ ಗಮನಿಸ್ತಾ ಇದ್ದೆ. 2014ರಲ್ಲಿ ಗೋದ್ರಾ ಗಲಭೆ ಮಾಡಿದವರೇ ಭಾರತದ ಪ್ರಧಾನಿ ಆದರು. ಆಗ ನಾನು ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದೆ. ನಂತರ, 2019ರ ಚುನಾವಣೆಯಲ್ಲಿ ನಾನು ದಕ್ಷಿಣ ಕನ್ನಡ ಡಿಸಿಯಾಗಿದ್ದೆ. ಆಗ ಲೋಕಸಭಾ ಚುನಾವಣೆ ನಡೆದು ಮತ್ತೆ ಬಿಜೆಪಿಗೆ ಹೆಚ್ಚು ಮತಗಳು ಬಿದ್ದು, ಅವರೇ ಪ್ರಧಾನಿಯಾದರು ಎಂದು ತಿಳಿಸಿದರು.