ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇದರ ಮಧ್ಯ ಮತ್ತೊಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ.
ಹೌದು ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದ್ದು, 2001 ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿಎಂ ಪತ್ನಿ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಇದೀಗ ಆ ಸೈಟ್ ಕೊಟ್ಟಿರುವುದು ನಿಯಮ ಬಾಹಿರ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದೆ.
50:50 ಅನುಪಾತ 2009 ರಲ್ಲಿ ಜಾರಿಗೆ ಬಂದಿದೆ. 2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲ. ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳಿಗಾಗಿ ಮಂಜೂರಾತಿಗಾಗಿ 50:50 ಅನುಪಾತ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅಮಾನತು ಆದೇಶದಲ್ಲೇ ರಾಜ್ಯ ಸರ್ಕಾರ ಹಲವು ಸತ್ಯ ಬಿಚ್ಚಿಟ್ಟಿದೆ. ಸರ್ಕಾರದ ಅಮಾನತು ಆದೇಶದ ಅಂಶಗಳೇ ಸಿಎಂಗೆ ಮುಳ್ಳಾಗಿದೆ. ಸಿಎಂ ಪತ್ನಿಯ ಸಹೋದರನ ಜಾಗವನ್ನು ಮೂಡಾ ವಶಪಡಿಸಿಕೊಂಡಿರೋದು 2001 ರಲ್ಲಿ. ಅಲ್ಲಿಗೆ 50:50 ಅನುಪಾತ ಇದಕ್ಕೆ ಅನ್ವಯ ಆಗಲ್ಲ. ಇದೀಗ ಸರ್ಕಾರಿ ಆದೇಶವೇ ಸಿಎಂಗೆ ಮುಳ್ಳಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.