ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ರೌಡಿಶೀಟರ್ಗಳ ಜೊತೆ ಸಿಗರೇಟು ಸೇದುತ್ತಾ ಕಾಲ ಕಳೆದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನ ಅಕ್ರಮಗಳು ಒಂದೊಂದಾಗಿಯೇ ಬಹಿರಂಗ ಆದವು. ಜೈಲಿನೊಳಗೆ ಖೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ಕೂಡ ಬೆಳಕಿಗೆ ಬಂತು. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಅದೇಶಿಸಲಾಗಿದೆ.
ಹೌದು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿದ ದರ್ಶನ್ ಹಾಗೂ ಇತರರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತಗೆ ಆದೇಶ ನೀಡಲಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ವಿಚಾರಣಾಧೀನ ಖೈದಿ ಆಗಿರುವ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಇರುವ ರೌಡಿಶೀಟರ್ಗಳ ಜೊತೆ ಹಾಯಾಗಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿದ ಫೋಟೋ ವೈರಲ್ ಆಯಿತು. ಅಲ್ಲದೇ, ಜೈಲಿನ ಹೊರಗೆ ಇರುವ ರೌಡಿಗಳ ಜೊತೆ ವಿಡಿಯೋ ಕಾಲ್ನಲ್ಲಿ ದರ್ಶನ್ ಮಾತನಾಡಿರುವುದು ಕೂಡ ಬಳಕಿಗೆ ಬಂದಿದೆ. ಆದ್ದರಿಂದ ಜೈಲಿನಲ್ಲಿ ಕಾನೂನಿನ ಉಲ್ಲಂಘನೆ ಆಗಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ಹೇಗೆ ಮೊಬೈಲ್ ವ್ಯವಸ್ಥೆ ಮಾಡಲಾಯಿತು ಅವರಿಗೆ ಸಿಗರೇಟ್ ಮಾದಕ ವಸ್ತುಗಳು ಸೇರಿದಂತೆ ಇತರೆ ಎಲ್ಲಾ ರೀತಿಯ ವ್ಯವಸ್ಥೆ ಮಾಡ್ಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯಲಿದೆ.ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ದರ್ಶನ್ಗೆ ವಿಐಪಿ ಟ್ರೀಟ್ಮೆಂಟ್ ಸಿಕ್ಕಿರುವ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಅನೇಕರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ.