ರಾಮನಗರ : ಜಿಲ್ಲೆಯ ಚನ್ನಪಟ್ಟಣದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದಿಂದ ನಾನೇ ಅಭ್ಯರ್ಥಿ ನಾನೇ ಬಿ ಫಾರ್ಮ್ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಡಿಕೆ ಸುರೇಶ್ ಗೆ ಒತ್ತಡ ಹಾಕುತ್ತಿದ್ದಾರೆ. ಆ ಕುರಿತು ನೋಡೋಣ. ನಾನು ಯಾರದೋ ಮಾತು ಕೇಳಿ ತೀರ್ಮಾನ ಮಾಡುವುದಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿಯ ಆಯ್ಕೆ ಆಗುತ್ತದೆ ಎಂದರು.
ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಸಂಘಟನೆಯ ಬಗ್ಗೆ ಗಮನಹರಿಸಬೇಕು.ಒಂದೊಂದು ಹೋಬಳಿ ಹಂಚಿಕೊಂಡು ಜನರ ಸೇವೆ ಮಾಡುತ್ತೇವೆ. ಯಾರೇ ಅಭ್ಯರ್ಥಿಯಾಗಲಿ ನನ್ನ ಮುಖ ನೋಡಿ ಮತ ಹಾಕಬೇಕು.ನನ್ನ ಮುಖ ನೋಡಿ ಜನರು ವೋಟ್ ಹಾಕಬೇಕು. ಉದ್ಯೋಗ ಮೇಳ, ನಿವೇಶನ, ಮನೆ ಹಂಚಿಕೆ, ಮಾಡುತ್ತಿದ್ದೇವೆ. ಮುಂದಿನ ವಾರ ಸಾಕಷ್ಟು ಯೋಜನೆಗಳಿಗೆ ಚಾಲನೆ ಕೊಡುತ್ತೇವೆ.ಕ್ಷೇತ್ರದಲ್ಲಿ ಹಿಂದೆ ಇದ್ದವರು ಯಾರು ಈ ಕೆಲಸ ಮಾಡಿಲ್ಲ ಎಂದು ಕನಕಪುರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಇನ್ನೂ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಆರ್ ವಿ ದೇಶಪಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮುಖ್ಯಮಂತ್ರಿ ಆಗಲಿ ಬಹಳ ಸಂತೋಷ. ದೇಶಪಾಂಡೆ ಅವರು ಸೀನಿಯರ್ ಅವರು ಏಕೆ ಸಿಎಂ ಆಗಬಾರದು ಎಂದು ಡಿಕೆ ಶಿವಕುಮಾರ್ ಹೇಳಿದರು.
ಮೈತ್ರಿಯಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ದೊಡ್ಡವರು ಮಾತನಾಡಲಿ.ಸದ್ಯ ಹೆಣ ಹೊರುವುದಕ್ಕೆ ನಾಲ್ಕು ಜನರನ್ನು ರೆಡಿ ಮಾಡಿ. ಚುನಾವಣೆ ಬಗ್ಗೆ ಕುಮಾರಸ್ವಾಮಿಗೆ ಯಾವುದೇ ಟೆನ್ಶನ್ ಇಲ್ಲ. ಕುಮಾರಸ್ವಾಮಿ ಚುನಾವಣೆ ಆಗಿದ್ರೆ ಟೆನ್ಶನ್ ಇರುತ್ತಿತ್ತು.ಬೇರೆಯವರ ಚುನಾವಣೆಗೆ ಅವರ್ಯಾಕೆ ಟೆನ್ಶನ್ ಮಾಡಿಕೊಳ್ಳುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.