ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರವಾಗಿ ಹೈಕೋರ್ಟ್ ನಲ್ಲಿ ಇದರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಈ ಮಧ್ಯ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ಗೆ ಲೋಕಾಯುಕ್ತ ಎಸ್ಐಟಿ ಮನವಿಯನ್ನು ಪುರಸ್ಕರಿಸಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸುತ್ತಿದೆ. ಆದ್ರೆ, ಇದೀಗ ರಾಜಭವನ, ಕುಮಾರಸ್ವಾಮಿ ಸೇರಿದಂತೆ ಇತರೆ ಯಾರದೇ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಹೌದು ಈ ಕುರಿತಂತೆ ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ನಡೆಸಿದರು. ಇದರ ಬೆನ್ನಲ್ಲೇ ರಾಜಭವನವು, ಪ್ರಾಸಿಕ್ಯೂಷನ್ ಕಡತಗಳು ನಮ್ಮ ಕಚೇರಿಯಲ್ಲಿ ಬಾಕಿ ಇಲ್ಲ ಎಂದು ಮಾಹಿತಿ ನೀಡಿದೆ.
ವಿವಿಧ ಸಕ್ಷಮ ಪ್ರಾಧಿಕಾರಗಳು ವಿಚಾರಣೆಗೆ ಅನುಮತಿ ಕೋರಿರುವ ಪ್ರಸ್ತಾವಣೆಗಳ ಬಾಕಿ ಇರು ಕುರಿತಂತೆ ರಾಜ್ಯಪಾಲರ ಕಚೇರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಟಿಜೆ ಅಬ್ರಹಾಂ ಅವರು ಅರ್ಜಿ ಸಲ್ಲಿಸಿದ್ದರು.ಈ ಮಾಹಿತಿ ಹಕ್ಕು ಅರ್ಜಿಗೆ ರಾಜ್ಯಭವನ ಕೇವಲ 9 ದಿನಗಳಲ್ಲೇ ಉತ್ತರಿಸಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಯಾವ ಕಡತವೂ ಸಹ ರಾಜ್ಯಪಾಲರ ಕಚೇರಿಯಲ್ಲಿ ಇಲ್ಲ ಎಂದು ಮಾಹಿತಿ ಒದಗಿಸಿದೆ.