ಬೆಂಗಳೂರು: ರಾಜ್ಯಾಧ್ಯಂತ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್ ಎನ್ನುವಂತೆ ಸೆಪ್ಟೆಂಬರ್2 ರ ನಾಳೆಯಿಂದ ಲ್ಯಾಂಡ್ ಬೀಟ್ ಆ್ಯಪ್ ಆಧರಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸರ್ಕಾರ ನಡೆಸಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಂತ ಕಂದಾಯ ಸಚಿವ ಕೃಷ್ಣಭೈರೇಗೌಡ, ಲ್ಯಾಂಡ್ ಬೀಟ್ ಆ್ಯಪ್ ಆಧರಿಸಿ ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಂದಾಯ, ಅರಣ್ಯ, ಶಿಕ್ಷಣ ಹಾಗೂ ಪಿಡಬ್ಲ್ಯೂಡಿ ಇಲಾಖೆ ಸೇರಿ ರಾಜ್ಯಾದ್ಯಂತ 1.41 ಕೋಟಿ ಎಕರೆ ಸರ್ಕಾರಿ ಜಮೀನು ಇದೆ ಎಂಬುದು ಲ್ಯಾಂಡ್ ಬೀಟ್ ಆ್ಯಪ್ ಮೂಲಕ ತಿಳಿದುಬಂದಿದೆ. ರಾಜ್ಯದಲ್ಲಿ ಈವರೆಗೆ 13.17 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಲಾಗಿದ್ದು, ನಾಳೆಯಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ.
ರಾಜ್ಯಾದ್ಯಂತ ಒಟ್ಟು 239 ತಹಸೀಲ್ದಾರ್ ಗಳಿದ್ದು, ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೆ 10 ರಿಂದ 20 ಒತ್ತುವರಿ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ವಾರಾಂತ್ಯದಲ್ಲಿ ಪ್ರಗತಿ ಪರಿಶೀಲಿಸಿ ವಿವರಗಳನ್ನು ಕಂದಾಯ ಆಯುಕ್ತಾಲಯಕ್ಕೆ ಸಲ್ಲಿಸಿದ್ದಾರೆ.