ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಜಾರಿಗೊಳಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ರಾಜ್ಯದ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬ್ಬಂದಿಗಳಿಗೂ 7ನೇ ರಾಜ್ಯ ಪರಿಷ್ಕೃತ ವೇತನ ಆಯೋಗದಂತೆ ವೇತನ ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕರಾದಂತ ಟಿಎನ್ ಶಿವಶಂಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ 7ನೇ ವೇತನ ಪರಿಷ್ಕೃತ ವೇತನ ಜಾರಿಯಾಗಿದ್ದು, ಅದರನ್ವಯ ನಿಮ್ಮ ವಲಯ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಲಿಪಿಕ ನೌಕರರುಗಳ ಮೂಲ ಸೇವಾ ಪುಸ್ತಕಗಳನ್ನು ಪರಿಶೀಲಿಸಿ 7ನೇ ಪರಿಷ್ಕೃತ ವೇತನ ಶ್ರೇಣಿಗಳ ನಿಯಮಗಳನ್ವಯ ಅನ್ವಯಿಸುವ ವೇತನ ಶ್ರೇಣಿ ಮತ್ತು ವೇತನ ನಿಗದಿಪಡಿಸತಕ್ಕದ್ದು ಎಂದಿದ್ದಾರೆ.
ಮುಂದುವರೆದು ಯಾವುದೇ ಅಧಿಕಾರಿ / ಸಿಬ್ಬಂದಿಯವರು ಮತ್ತು ಲಿಪಿಕ ನೌಕರರ ವೇತನ ನಿಗದಿಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ಮುಖ್ಯ ಕಛೇರಿಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳತಕ್ಕದ್ದು ಹಾಗೂ ತಪ್ಪು ವೇತನ ನಿಗದಿಪಡಿಸಿ ವೇತನ ಭರಿಸಿದಲ್ಲಿ ಸಂಬಂಧಿಸಿದ ಸೇವಾ ಪುಸ್ತಕ ನಿರ್ವಹಣಾ ಪ್ರಾಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು, ಇಲಾಖೆಯ ಗ್ರೂಪ್-ಎ ಹಾಗೂ ಬಿ ವರ್ಗದ ಅಧಿಕಾರಿಗಳ ವೇತನ ಪರಿಷ್ಕರಣೆಯನ್ನು ಮಹಾಲೇಖಪಾಲಕರಿಂದ ಅನುಮೋದನೆಗೊಂಡ ನಂತರ ನಿಯಮಾನುಸಾರ ವೇತನವನ್ನು ಭರಿಸಲು ಈ ಮೂಲಕ ಆದೇಶಿಸಿದ್ದಾರೆ.