ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಶಾಲೆಗಳ ಮೊದಲ ಮಾನ್ಯತೆಯನ್ನು 10 ವರ್ಷಗಳ ಅವಧಿಗೆ ಅನ್ವಯಿಸಿ ನವೀಕರಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರವು ಖಾಸಗಿ ಶಾಲೆಯ ಮಾನ್ಯತೆ ಅವಧಿಯನ್ನು 10 ವರ್ಷಗಳ ಅವಧಿಗೆ ಅನ್ವಯಿಸಿ ನವೀಕರಿಸಲು ನಿರ್ಧರಿಸಿದೆ. ನಿಬಂಧನೆಗಳನ್ನು ಅನುಸರಿಸಿ ಶಾಶ್ವತ ಮಾನ್ಯತೆ ನೀಡಲು ಸರ್ಕಾರದಿಂದ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಆರ್ಟಿಇ ಕಾಯ್ದೆ ಜಾರಿಗೆ ಮೊದಲು ಇದ್ದಂತೆ ಮಾನ್ಯತೆ ನವೀಕರಣ, ಶಾಶ್ವತ ನವೀಕರಣಕ್ಕೆ ಅವಕಾಶ ಕಲ್ಪಿಸಲಿದೆ.
ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಾವಳಿಗಳಿಗೆ ಸರ್ಕಾರ ತಿದ್ದುಪಡಿ ಮಾಡಿದ್ದು, ರಾಜ್ಯದಲ್ಲಿ ಆರಂಭಿಸಲು ನಿಯಮಾನಸಾರ ಮೊದಲ ವರ್ಷ ಅನುಮತಿ ನೀಡಲಾಗುವುದು. ನಂತರ ನಿಬಂಧನೆ ಅನುಸರಿಸಿ 10 ವರ್ಷ ಅವಧಿಗೆ ಮಾನ್ಯತೆ ನವೀಕರಿಸುವುದು, ಬಳಿಕ ಶಾಶ್ವತ ಮಾನ್ಯತೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಖಾಸಗಿ ಶಾಲೆ ಆರಂಭವಾದ ಒಂದು ವರ್ಷದ ನಂತರ 15 ವರ್ಷಗಳಿಗೆ ಅನ್ವಯಿಸಿ ಮಾನ್ಯತೆ ಶಾಶ್ವತ ನವೀಕರಣ ನೀಡಲು ಕರ್ನಾಟಕ ಶಿಕ್ಷಣ ಅವಕಾಶ ಇತ್ತು. ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಬಳಿಕ 2018ರಲ್ಲಿ ಮಾನ್ಯತೆ ನವೀಕರಣ ಅವಧಿಯನ್ನು 5 ವರ್ಷಕ್ಕೆ ಇಳಿಸಿ ಶಾಶ್ವತ ನವೀಕರಣ ಅವಕಾಶವನ್ನು ರದ್ದು ಮಾಡಲಾಗಿತ್ತು. ಅಂದಿನಿಂದಲೂ ಖಾಸಗಿ ಶಾಲೆಗಳು ಇದನ್ನು ವಿರೋಧಿಸುತ್ತಲೇ ಬಂದಿದ್ದವು. ಕೆಲ ಖಾಸಗಿ ಶಾಲಾ ಸಂಘಟನೆಗಳು ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದವು.