ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ಗೆ ಜೈಲಿನಲ್ಲಿಯೇ ಎಲ್ಲ ರೀತಿಯ ರಾಜಾತಿಥ್ಯ ವಿಚಾರ ಬಹಿರಂಗವಾದ ಬೆನ್ನಲ್ಲೇ, ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರಕ್ಕೆ ಖಡಕ್ ಅಧಿಕಾರಿಗಳನ್ನು ನೇಮಿಸಿದೆ.
ಹೌದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಅಧಿಕಾರಿಗಳನ್ನು ಗೃಹ ಇಲಾಖೆ ಅಮಾನತು ಮಾಡಿದ್ದು, ಕರ್ತವ್ಯ ಲೋಪ ಎಸಗಿದವರ ಸ್ಥಳಕ್ಕೆ ಬೇರೆ ಅಧಿಕಾರಿಗಳ ನೇಮಕಕ್ಕೆ ಆದೇಶಿಸಿದೆ.ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಶ್ರೀ ಅವರನ್ನು ಹಾಗೂ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತು ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ.ಸುರೇಶ್ ಎಂಬುವವರನ್ನು ಸರ್ಕಾರ ನೇಮಕ ಮಾಡಿದೆ.
ಅಷ್ಟೇ ಅಲ್ಲ, ಪರಪ್ಪನ ಅಗ್ರಹಾರಕ್ಕೆ KISF(ಕರ್ನಾಟಕ ಕೈಗಾರಿಕ ಭದ್ರತಾ ದಳ ಇಲಾಖೆ ಸಿಬ್ಬಂದಿ & ಅಧಿಕಾರಿಗಳು) ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಅವರ ಅನುಮತಿ ಪಡೆದು ಜೈಲಿನ ಆವರಣಕ್ಕೆ ಪ್ರವೇಶಿಸಬೇಕಾಗಿದೆ. ಇನ್ನು ಕೇಂದ್ರ ಕಾರಗೃಹ ಭದ್ರತೆಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್, ಇಬ್ಬರು ಇನ್ಸ್ಪೆಕ್ಟರ್ಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ.