ಉತ್ತರಕನ್ನಡ : ಜಿಲ್ಲೆಯ ಕಾರವಾರ ನಗರ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಬೀಗಿದ್ದು, ಕಾಂಗ್ರೆಸ್ ಮತ್ತೆ ಸೋಲನ್ನೊಪ್ಪಿಕೊಂಡಿದೆ. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ 19 ಮತಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 14 ಮತಗಳನ್ನು ಪಡೆಯಲಷ್ಟೇ ಶಕ್ತವಾಯಿತು.
ಹಾಗಾಗಿ ಕಾರವಾರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾರವಾರ, ಅಂಕೋಲ ಹಾಲಿ ಶಾಸಕ ಸತೀಶ್ ಸೈಲ್ ಗೆ ಇದೀಗ ಭಾರಿ ಮುಖಭಂಗವಾಗಿದೆ. ಕಾರವಾರ ನಗರ ಸಭೆ ಅಧ್ಯಕ್ಷರಾಗಿ ಬಿಜೆಪಿಯ ರವಿರಾಜ್ ಅಂಕೋಲೇಕರ್ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಪ್ರೀತಿ ಜೋಶಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಪರ 19 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ಅಭ್ಯರ್ಥಿ ಪರ ಕೇವಲ 14 ಮತ ಚಲಾವಣೆಯಾದವು. ಐದು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ವೇಳೆ ನಗರಸಭೆಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಜಿ ಶಾಸಕಿ ರೂಪಾಲಿ ನಾಯಕ್ ಅವರು ಸನ್ಮಾನಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು.