ಬೆಳಗಾವಿ : ಸದ್ಯ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು ಈ ಒಂದು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಕುರಿತು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರು ಸ್ಪೋಟಕ ಭವಿಷ್ಯ ನುಡಿದಿದ್ದು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಕಚೇರಿ ಉದ್ಘಾಟಿಸಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಡಾ ಪ್ರಕರಣದ ಎಲ್ಲ ದಾಖಲೆಗಳನ್ನು ನೋಡಿದ್ದೇನೆ. ಇದರಲ್ಲಿ ನಿಯಮ ಉಲ್ಲಂಘಿಸಿರುವುದು ಮತ್ತು ಸಿದ್ದರಾಮಯ್ಯನವರೇ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟ. ನಾನು ಒಬ್ಬ ವಕೀಲನಾಗಿ ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಅವರಿಗೆ ಶಿಕ್ಷೆಯಾಗಲಿದೆ ಎಂದು ಭವಿಷ್ಯ ನುಡಿದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದಕ್ಕೆ ಬಹಳಷ್ಟು ಖುಷಿ ಪಡೋರು ಕಾಂಗ್ರೆಸ್ ನಾಯಕರೇ ಹೆಚ್ಚು. ನಾವು ಸಿದ್ದರಾಮಯ್ಯ ಹಿಂದೆ ಇದ್ದೇವೆ, ಅವರ ಹೋರಾಟಕ್ಕೆ ಬೆಂಬಲಿಸುತ್ತೇವೆ ಎನ್ನುವವರು, ಒಳಗೊಳಗೆ ಖುಷಿ ಪಡೋರು ಕಾಂಗ್ರೆಸ್ ನಾಯಕರು. ಅದರ ಪರಿಣಾಮ ಸ್ವಲ್ಪದರಲ್ಲೇ ಗೊತ್ತಾಗುತ್ತದೆ.ಅಕ್ಕಪಕ್ಕದವರೇ ದಾಖಲೆ ಬಿಡುಗಡೆ ಮಾಡಿದ್ದರೆಂದು ನಾನು ಯಾಕೆ ಹೇಳಲಿ? ಅದು ಈಗ ಹೊರಗಡೆಗೆ ಬಂದಿದೆ, ಖುಷಿ ಪಡೋರು ಜಾಸ್ತಿ ಇದ್ದಾರೆ ಎಂದರು.
ನಿರಾಣಿ, ಜೊಲ್ಲೆ ಯಾವುದೇ ಅಧಿಕಾರದಲ್ಲಿ ಇಲ್ಲ. ಈಗ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ವಿಧಾನಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡಲಿಲ್ಲ. ಮುಡಾ ಕೇಸಿನ ಎಲ್ಲಾ ಫೈಲ್ ನೋಡಿದ್ದೇನೆ. ಕೃಷಿ ಭೂಮಿ ಎಂದು ತೋರಿಸಿದ್ದಾರೆ. ಚುನಾವಣೆ ಅಫಡಿವೀಟ್ನಲ್ಲಿ ಕಡಿಮೆ ಹಣ ತೋರಿಸಿದ್ದಾರೆ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ ಎಂದರು.
ಬೀದಿಗೆ ಇಳಿದು ಹೋರಾಟ ಮಾಡುವುದು ಸರಿಯಲ್ಲ. ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಿತ್ತು. ಸಿಎಂ ಸಿದ್ದರಾಮಯ್ಯ ಈವರೆಗೆ ರಾಜೀನಾಮೆ ನೀಡುತ್ತಿಲ್ಲ. ಸಿಎಂ ಹುದ್ದೆಯಲ್ಲಿ ಇರಲು ಸಿದ್ದರಾಮಯ್ಯ ಅವರು ಅನರ್ಹ. ರಾಜ್ಯಪಾಲರ ನಿರ್ಧಾರಗಳು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಅಂಗೀಕಾರವಾಗಿವೆ ಎಂದು ಶೆಟ್ಟರ್ ಸಮರ್ಥಿಸಿಕೊಂಡರು.