ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಪರವಾಗಿ ಸಂಪುಟ ಇದೆ. ಅಲ್ಲದೆ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅವರ ಬೆನ್ನಿಗೆ ಇದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ನಾವು ಹೋರಾಟ ಮಾಡುತ್ತೇವೆ.ಕಾನೂನು ಬಗ್ಗೆ ನಮಗೆ ಗೌರವಿದೆ. ನಮಗೆ ರಕ್ಷಣೆ ಸಿಗುವ ನಂಬಿಕೆ ಇದೆ ಎಂದು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ಸರ್ಕಾರ, ಸಚಿವ ಸಂಪುಟ ಹಾಗೂ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ಇದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಪಿತೂರಿ ಮಾಡಿದ್ದಾರೆ. ಪಿತೂರಿ ವಿರುದ್ಧ ಹೋರಾಟ ನಡೆಸುತ್ತೇವೆ. ನಮ್ಮ ಸರ್ಕಾರದ ವಿರುದ್ಧ ದೊಡ್ಡ ಷಡ್ಯಂತರ ನಡಿತಿದೆ. ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಸಂವಿಧಾನ ರಕ್ಷಣೆ ಮಾಡಬೇಕಾಗಿದೆ ಎಂದರು.
ಕಾನೂನಿನ ಸಮರ ಕೈಗೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಒಬ್ಬ ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ರಾಜಕೀಯ ಮುಖ್ಯಮಂತ್ರಿ ಆಗಿ ಬೆಳೆಯುತ್ತಾ ಇದ್ದಾನೆಂದು ಸಹಿಸಕ್ಕಾಗದೆ ಬಿಜೆಪಿ ಎಲ್ಲ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಷಡ್ಯಂತರ ನಡೆಸುತ್ತಿದೆ. ಇದನ್ನು ಧಿಕ್ಕರಿಸಿ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.