ದಾವಣಗೆರೆ : ಬಿ ವೈ ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಬಿಜೆಪಿಯ ಮಾಜಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದು, ವಿಜಯೇಂದ್ರ ಗೆಲುವಿಗೆ ಯಡಿಯೂರಪ್ಪ ಕಾರಣ. ಅವರಿಂದಲೇ ನಾವು ಶಾಸಕ, ಸಚಿವರು ಆಗಿದ್ದು ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣ ಎಂಬುವುದು ಸುಳ್ಳು. ಬಿ ಎಸ್ ಯಡಿಯೂರಪ್ಪ ಅವರು ಬಿ ವೈ ವಿಜಯೇಂದ್ರ ಗೆಲುವಿಗೆ ಕಾರಣ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಬಿಎಸ್ ಯಡಿಯೂರಪ್ಪ. ಬಿಎಸ್ ಯಡಿಯೂರಪ್ಪ ಅವರಿಂದಲೇ ನಾವು ಶಾಸಕ ಸಚಿವರಾಗಿದ್ದು ಎಂದು ತಿಳಿಸಿದರು.
ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿದ್ದು ವರಿಷ್ಠರು. ವಿಜಯೇಂದ್ರ ಸ್ಥಾನ ಬದಲಾವಣೆ ಅಸಾಧ್ಯ. ವರಿಷ್ಟರು ಅನುಮತಿ ನೀಡಿದರೆ ಯತ್ನಾಳ ಪಾದಯಾತ್ರೆ ಮಾಡಲಿ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಹಾಗೂ ಹಿಂದುತ್ವ ತುಂಬಿದೆ ಎಂದು ಅವರು ತಿಳಿಸಿದರು.
ನನಗೆ ಕಾಂಗ್ರೆಸ್ ಅಗತ್ಯವೇ ಇಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸಚಿವ ಎಸ್ ಎಸ್ ಮಲ್ಲಿಕಾರ್ಜುನರನ್ನು ನಾಲ್ಕು ಬಾರಿ ಭೇಟಿ ಮಾಡಿದ್ದೇನೆ. ಮಲ್ಲಿಕಾರ್ಜುನ್ ಭೇಟಿಯ ವೇಳೆ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ತಿಳಿಸಿದರು.