ಹಾವೇರಿ: ಮಳೆಗಾಲದ ಸಂದರ್ಭದಲ್ಲಿ ಅದರಲ್ಲೂ ರೈತರು ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಇದೀಗ ಪಂಪ್ ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ – ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಸಂಭವಿಸಿದೆ.
ಹೌದು ಭತ್ತದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ದುರಸ್ತಿ ಮಾಡಲು ತಂದೆ ಕರಬಸಪ್ಪ ಮಗ ದರ್ಶನ್ ಮುಂದಾಗಿದ್ದರು.ಈ ವೇಳೆ ಮೋಟಾರ್ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಂದೆ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.