ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರ, ನಾಪತ್ತೆಯಾಗಿರುವವರು, ಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 387 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ.
ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿ, ಅಲ್ಲಿ ತಲುಪಿರೋದಾಗಿ ತಿಳಿದು ಬಂದಿದೆ.
ಕೇರಳದ ವಯನಾಡು ಭೂಕುಸಿತ ದುರಂತವು ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಇದರ ನಡುವೆ ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. 6 ದಿನಗಳಿಂದ ತನ್ನ ಮಾಲೀಕನಿಗಾಗಿ ಹುಡುಕಾಡಿದಂತ ನಾಯಿಯೊಂದಕ್ಕೆ ಒಡತಿಯೊಬ್ಬರು ದೊರೆತಿದ್ದು ಕಂಡು, ಸಂತಸಗೊಂಡಿರುವಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ.
ವಯನಾಡು ಭೂಕುಸಿತ ಘಟನೆಯಿಂದಾಗಿ 1,208 ಮನೆಗಳು ಹಾನಿಗೊಂಡಿದ್ದರೇ, ಮುಂಡಕ್ಕೈನಲ್ಲಿ 540, ಚೋರ ಮಂಡಲಾದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮಗೊಂಡಿರುವುದಾಗಿ ವರದಿಯಾಗಿದೆ.
ಹಿಂದೆಂದೂ ಕಂಡು ಕೇಳರಿಯದಂತ ವಯನಾಡು ಭೂ ಕುಸಿತದಿಂದಾಗಿ ಈವರೆಗೆ 3,700 ಎಕರೆ ಕೃಷಿಭೂಮಿ ನಾಶವಾಗಿದೆ. 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿ ಹೋಗಿದೆ.