ಹಾವೇರಿ : ರಾಜ್ಯದಲ್ಲಿ ಇದೀಗ ಅಪಾರ ಪ್ರಮಾಣದ ಮಳೆಯಿಂದ ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿವೆ. ಅಲ್ಲದೆ ಜನರಲ್ಲಿ ವಿವಿಧ ರೋಗಗಳ ಲಕ್ಷಣಗಳು ಕಂಡುಬರುತ್ತಿದ್ದು ಅದರಲ್ಲೂ ಡೆಂಗಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಮಧ್ಯ ಹಾವೇರಿಯಲ್ಲಿ ಸರ್ಕಾರಿ ವಸತಿ ನಿಲಯದ 32 ಮಕ್ಕಳಲ್ಲಿ ಫಂಗಸ್ ರೋಗ ಕಂಡುಬಂದಿದೆ.
ಹೌದು ಹಾವೇರಿ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಫಂಗಸ್ನಿಂದ ಬಳಲುತ್ತಿದ್ದಾರೆ. 32 ಜನ ವಿದ್ಯಾರ್ಥಿಗಳಲ್ಲಿ ಫಂಗಸ್ ಲಕ್ಷಣಗಳು ಕಂಡು ಬಂದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ.
ಕಳೆದ 20 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಬಟ್ಟೆ ಒಣಗದೆ ವಸತಿ ನಿಲಯದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹಸಿಯಾದ ಬಟ್ಟೆ ತೊಟ್ಟು ಶಾಲೆಗೆ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮೈಮೇಲೆ ಗುಳ್ಳೆಗಳು ಏಳುತ್ತಿದ್ದು, ಫಂಗಸ್ ಕಾಣಿಸಿಕೊಂಡಿದೆ.ಈ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳಲ್ಲಿ ಗಂಭೀರವಾದ ಫಂಗಸ್ ಲಕ್ಷಣಗಳು ಕಂಡುಬಂದಿವೆ. ಓರ್ವ ವಿದ್ಯಾರ್ಥಿಯನ್ನು ಊರಿಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳ ಸ್ಥಿತಿ ಕಂಡು ಪೋಷಕರು ಗಾಬರಿಗೊಂಡಿದ್ದಾರೆ.