ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಇದೀಗ ಸಂಕಷ್ಟ ಎದುರಾಗಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಜೆಡಿಎಸ್ ಹಾಗೂ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿವೆ. ಇನ್ನು ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ದರು ಇದೀಗ ಅವರಿಗೆ ಕರ್ಮ ರಿಟರ್ನ್ ಆಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಿದರು. ಅವರು ಮಾಡಿದ ಕರ್ಮ ಈಗ ರಿಟರ್ನ್ ಆಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು. ಅಂದು ಅವರು ಅಧಿಕಾರಕ್ಕಾಗಿ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ದರು.ಇವತ್ತು ಅವರ ಕುಟುಂಬ ಹಗರಣದಲ್ಲಿ ಸಿಲುಕಿಕೊಂಡಿದೆ ದೇವರು ಎಲ್ಲವನ್ನು ನೋಡುತ್ತಿರುತ್ತಾನೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು.
ವಾಲ್ಮೀಕಿ ಹಗರಣ ಆಗಿರಬಹುದು ಮುಡಾ ಹಗರಣ ಆಗಿರಬಹುದು ನೇರವಾಗಿ ಇವತ್ತು ರಾಜ್ಯದ ಮುಖ್ಯಮಂತ್ರಿಗಳು ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವತ್ತು ಅವರು ಯಾವ ತಪ್ಪು ಮಾಡಿಲ್ಲ ಅಂದರೆ ಎಷ್ಟೊತ್ತಿಗೆ ಆಗಲಿ ಅವರು ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಿದ್ದರೆ ತುಂಬಾ ಗೌರವದಿಂದ ಅವರ ಹೆಸರು ಉಳಿಯುತ್ತಿತ್ತು. ಆರೋಪ ಬಂದ ತಕ್ಷಣ ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಬೇಕಾಗಿತ್ತು.
ಇನ್ನು ಬಿಜೆಪಿ ಅವಧಿಯಲ್ಲಿನ ಹಗರಣಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಆಯ್ತು ಅವರು ಏನು ಮಾಡಿದರು? ನಿಮ್ಮ ಮೇಲೆ ಹಗರಣ ಆರಂಭಿಸಿದರೆ ಇವತ್ತು ಈ ರೀತಿ ಮಾತನಾಡುತ್ತೀರಾ? ನಿಮ್ಮ ಅಧಿಕಾರ ಅವಧಿಯಲ್ಲಿ, ಯುಪಿಎ ಸರ್ಕಾರ ಅವಧಿಯಲ್ಲಿ ನೀವೆಲ್ಲ ಏನು ತೊಂದರೆ ಕೊಟ್ಟಿದ್ದೀರಿ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಹಾಗಾಗಿ ಇವತ್ತು ನೀವು ಯಾವ ತಪ್ಪು ಮಾಡಿಲ್ಲ ಅಂತ ಅಂದರೆ ತನಿಖೆಯನ್ನು ಎದುರಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟು ತನಿಖೆಯನ್ನು ಎದುರಿಸಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದರು.