ನವದೆಹಲಿ : ದಿಲ್ಲಿಯ ಆಶಾ ಕಿರಣ ನಿಲಯದಲ್ಲಿ ಕಳೆದ 20 ದಿನದಲ್ಲಿ 14 ಮಂದಿ ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ 48 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಚಿವೆ ಆತಿಷಿ ಆದೇಶಿಸಿದ್ದಾರೆ.
ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಬಿಜೆಪಿ , ನಿರ್ಲಕ್ಷ್ಯ, ಅವ್ಯವಸ್ಥೆಯ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಆರೋಪಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ಕುರಿತು ತನಿಖೆಗೆ ಸಮಿತಿ ರಚಿಸಿದೆ. ಈ ಬೆನ್ನಲ್ಲೇ ಆಪ್ ಸಚಿವೆ ಆತಿಷಿ . ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಯನ್ನು ಆರಂಭಿಸುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದಾರೆ.
ದೆಹಲಿ ಸರ್ಕಾರವು ಬುದ್ದಿಮಾಂದ್ಯತೆ, ವಿಶೇಷ ಚೇತನರಿಗಾಗಿ , ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಆಶಾ ಕಿರಣ ನಿಲಯವನ್ನು ನಡೆಸುತ್ತಿದೆ. ಕಳೆದ ಮೂರು ವಾರಗಳಲ್ಲಿ ಇಲ್ಲಿ ಆಶ್ರಯವನ್ನು ಪಡೆದಿರುವವರ ಪೈಕಿ 14 ಮಂದಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.