ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಜೊತೆ ವಿವಿಧ ಇಲಾಖೆಗಳು ಕೋರಿಕೆ ಸಲ್ಲಿಸುವ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ನಡೆಸುತ್ತಿದೆ. ಈ ಪರೀಕ್ಷೆಗಳು ಅತ್ಯಂತ ಪಾರದರ್ಶಕತೆಯಿಂದ ನಡೆಸುವುದು ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ವೆಬ್ ಕಾಸ್ಟಿಂಗ್) Web Casting ಮೂಲಕ ಆಧುನಿಕ ತಂತ್ರಜ್ಞಾನಗಳೊಂದಿಗೆ AI ಸಿಸಿ ಕ್ಯಾಮೆರಾ ಗಳನ್ನು ಬಳಕೆ ಮಾಡಲು ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ 10 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳ ಹಸ್ತ ಮುದ್ರೆ ಸಂಗ್ರಹ ಹಾಗೂ ಮುಖ ಚಹರೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸಲು ಕೂಡ ಪ್ರಾಧಿಕಾರದ ಸಭೆಯು ಒಪ್ಪಿಗೆ ನೀಡಿತು. ಇದರಿಂದ ಅಭ್ಯರ್ಥಿಗೆ ಹೊರತಾಗಿ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಬರೆಯುವುದನ್ನು ತಪ್ಪಿಸಲು ಅನುಕೂಲವಾಗಲಿದೆ. ಈ ಸಂಬಂಧಪಟ್ಟಂತೆ 10 ಕೋಟಿ ರೂ ಮೊತ್ತದ ಟೆಂಡರ್ ಆಹ್ವಾನಿಸಲು ಅನುಮೋದನೆ ನೀಡಲಾಯಿತು ಎಂದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ಆಧಾರಿತ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 20 ಸಾವಿರಕ್ಕಿಂತ ಕಡಿಮೆ ಅಭ್ಯರ್ಥಿಗಳು ಇದ್ದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ನಿರ್ಧಾರಕ್ಕೂ ಸಭೆ ಒಪ್ಪಿಗೆ ನೀಡಿತು ಎಂದು ತಿಳಿಸಿದರು.
ಮುಂದಿನ ಎಲ್ಲಾ ಪರೀಕ್ಷೆಗಳು ಈ ರೀತಿಯ ಅತ್ಯಧುನಿಕ ತಂತ್ರಜ್ಞಾನವನ್ನು ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸುವ ಮೂಲಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ ಎಂದರು.
ಸಿಇಟಿ ಪ್ರವೇಶ ಪರೀಕ್ಷೆ
ಆಗಸ್ಟ್.14 ರಿಂದ ನೀಟ್ ಪ್ರವೇಶ ಪರೀಕ್ಷೆ ಆರಂಭವಾಗಲಿದ್ದು, ತದನಂತರ ರಾಜ್ಯದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆ ಆರಂಭಿಸಲು ನಿರ್ಧರಿಸಲಾಯಿತು.
ಇಂದು ನಡೆದ 31ನೇ ಆಡಳಿತ ಮಂಡಳಿ ಸಭೆಯಲ್ಲಿ ಸಹ ಅಧ್ಯಕ್ಷರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್, ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶ್ರೀಕರ್ ವೈದಿಕ ಶಿಕ್ಷಣ ಕಾರ್ಯದರ್ಶಿ ಮೋಹಿನ್ ತಾಂತ್ರಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಇತರ ಅಧಿಕಾರಿಗಳ ಪಾಲ್ಗೊಂಡಿದ್ದರು.