ಹಾಸನ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ತೆಗೆದುಕೊಂಡು ಪ್ರಾಸಿಕ್ಯೂಷನ್ಗೆ ನೋಟೀಸ್ ನೀಡುತ್ತಾರೆ ಎಂಬ ವದಂತಿ ಹರಡುತ್ತಿದೆ. ಈ ಕುರಿತು ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು ಬಿಜೆಪಿಯವರು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಒಂದು ಇಂಚು ಅಲುಗಾಡಿಸಿದರೂ ರಕ್ತಕ್ರಾಂತಿ ನಡೆಯುತ್ತದೆ ಎಂದು ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಒಂದು ಇಂಚು ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ ನೀವು ಎಚ್ಚರಿಕೆಯಿಂದ ಇರಿ. ನಿಮಗೆ ಏನಾದರೂ ಆ ಆಲೋಚನೆ ಇದ್ದರೆ ವಾಪಾಸ್ ತೆಗೆದುಕೊಳ್ಳಿ, ಇಲ್ಲವಾದರೆ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನೋಟಿಸ್ ಜಾರಿ ಮಾಡಿದ ಘಟನೆ ನಡೆದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಇದಕ್ಕೆ ನಾವು ತಯಾರಾಗಿದ್ದೇವೆ, ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಅನಿವಾರ್ಯ ಘಟನೆ ನಡೆದರೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಯುದ್ಧಕ್ಕೆ ತಯಾರಾಗಿ. ಈ ರಾಜ್ಯದಲ್ಲಿ ಯುದ್ದನೇ ಮಾಡಬೇಕಾಗುತ್ತದೆ ಎಂದು ಗುಡುಗಿದರು.
ಬಿಜೆಪಿ ಸರ್ಕಾರ ಎರಡು ಬಾರಿಯೂ ನೇರವಾಗಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದೆ. ಈ ಬಾರಿ ಪುನಃ ಇದೇ ಆಟವನ್ನು ಆಡಲು ಬಿಜೆಪಿಯವರು ಹೊರಟಿದ್ದಾರೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಸತ್ಯಶೋಧನೆ ಸಮಿತಿ ಸಭೆ ನಡೆಸಿದ್ದೇವೆ. ಇಂತಹ ಕೃತ್ಯವನ್ನು ತಡೆಯುವಂತೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ ಎಂದು ತಿಳಿಸಿದರು.