ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರು ಜೈಲಿನ ಊಟ ಸೇರುತ್ತಿಲ್ಲ ಎಂದು ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇವರ ಅರ್ಜಿ ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಒಂದು ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಊಟ ನೀಡಲು ಆಗಲ್ಲ ಎಂದು ಖಾರವಾಗಿ ತಿಳಿಸಿತು.
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ದರ್ಶನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕ ಸದಸ್ಯ ಪೀಠವು ಅನಾರೋಗ್ಯ ತುಂಬಾ ಬಿಗಡಾಯಿಸಿದ್ದರೆ ಅದನ್ನು ಜೈಲು ವೈದ್ಯರು ಪರಿಗಣಿಸುತ್ತಾರೆ. ವೈದ್ಯರು ಏನು ಸೂಚಿಸುತ್ತಾರೋ ಅದನ್ನು ಜೈಲಿನಲ್ಲಿ ನೀಡುತ್ತಾರೆ. ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಆಹಾರ ಕೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿಚಾರಣಾಧೀನ ಖೈದಿಗಳು ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಜೈಲು ಅಧಿನಿಯಮ ಸೆಕ್ಷನ್ 30ರ ಅಡಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ಜೈಲು ಕೈಪಿಡಿ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನಿರಾಕರಿಸಿದೆ. ಜೈಲು ಕೈಪಿಡಿಗೆ ಕಾನೂನಿನ ಬೆಂಬಲವಿಲ್ಲ. ಕೈಪಿಡಿಯಲ್ಲಿರುವುದು ಕೇವಲ ಆಡಳಿತಾತ್ಮಕ ನಿಯಮಗಳಷ್ಟೇ ಎಂದು ಪ್ರಭುಲಿಂಗ್ ನಾವದಗಿ ವಾದ ಮಾಡಿದರು.
ದರ್ಶನ್ಗೆ ಪೌಷ್ಟಿಕ ಆಹಾರ ನೀಡಬೇಕೆಂದು ಜೈಲಿನ ವೈದ್ಯಾಧಿಕಾರಿಯೂ ಸಲಹೆ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಉತ್ತರಿಸಿದ ಜಡ್ಜ್ ‘ಸಾವಿರಾರು ವಿಚಾರಣಾಧೀನ ಖೈದಿಗಳಿಗೆ ಪೌಷ್ಟಿಕ ಆಹಾರದ ಅಗತ್ಯ ಇರಬಹುದು. ದರ್ಶನ್ಗೂ ಇತರೆ ವಿಚಾರಣಾಧೀನ ಕೈದಿಗಳಿಗೂ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಜೈಲು ಅಧಿಕಾರಿಗಳಿಗೆ ದರ್ಶನ್ ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಲು ಒಂದು ವಾರ ಕಾಲಾವಕಾಶ ಕೊಡಿ.ಮನವಿಯನ್ನು ಮಾನವೀಯತೆಯಿಂದ ಅಧಿಕಾರಿಗಳು ಪರಿಗಣಿಸಲಿ ಎಂದು ದರ್ಶನ್ ಪರ ವಕೀಲರು ಕೋರಿದರು. ಎಲ್ಲ ಕೈದಿಗಳ ಬಗ್ಗೆಯೂ ಇದೇ ಮಾನವೀಯತೆ ಇರಬೇಕು. ಸೆಲೆಬ್ರಿಟಿ ಎಂದು ಬೇರೆ ನಿಯಮಗಳು ಇರುವುದಿಲ್ಲ ಎಂದು ಹೇಳಿ ಆಗಸ್ಟ್ 20ಕ್ಕೆ ವಿಚಾರಣೆ ಮುಂದೂಡಿತು.